ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಶಿವಸೇನೆ ಕಾರ್ಯಕರ್ತರು ಹಲ್ಲೆ ನಡೆಸಿಲ್ಲ

ಮಹಾರಾಷ್ಟ್ರದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಶಿವಸೇನಾ ಗೂಂಡಾಗಳು ಹಲ್ಲೆ ನಡೆಸುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಶಿವಸೇನಾ ಗೂಂಡಾಗಳು ಹಲ್ಲೆ ಮಾಡಿದ ವಿಡಿಯೋ.

ನಿಜಾಂಶ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ ನಗರದಲ್ಲಿರುವ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವ ವಿಡಿಯೋ ಅದಾಗಿದೆ. ‘24 ಆಗಸ್ಟ್ 2020’ರಂದು ರೈತರಿಗೆ ಬೆಳೆ ಸಾಲವನ್ನು ಮಂಜೂರು ಮಾಡದ ಕಾರಣ ಯುವ ಕಾಂಗ್ರೆಸ್ ಕಾರ್ಯಕರ್ತರು ಮಲ್ಕಾಪುರ ನಗರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದರು. ಆ ಘಟನೆಗೂ ಶಿವಸೇನೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘13 ಸೆಪ್ಟೆಂಬರ್ 2020 ’ರಂದು‘ ದಿ ಟೈಮ್ಸ್ ಆಫ್ ಇಂಡಿಯಾ’ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಸುದ್ದಿ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ‘ಟೈಮ್ಸ್ ನೌ’ ಸುದ್ದಿವಾಹಿನಿಯು ಮಾಡಿರುವ ಟ್ವೀಟ್‌ನಲ್ಲೂ ಇದೇ ವಿಡಿಯೋ ಕಂಡುಬಂದಿದೆ. ವಿಡಿಯೋದಲ್ಲಿ, ಯುವ ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ‘10 ಸೆಪ್ಟೆಂಬರ್ 2020’ ರಂದು ‘ನ್ಯೂಸ್ 18 ಲೋಕ್‌ಮತ್’ಸುದ್ದಿವಾಹಿನಿಯು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ ನಗರದಲ್ಲಿ ನಡೆದಿದೆ ಎಂದು ವಿಡಿಯೋ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯ ಮರಾಠಿ ಚಾನೆಲ್ ‘7 ಸ್ಟಾರ್ ನ್ಯೂಸ್’ ಕೂಡ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, ಯುವ ಕಾಂಗ್ರೆಸ್ ಮುಖಂಡ ಮತ್ತು ಬೆಂಬಲಿಗರು ಮಹಾರಾಷ್ಟ್ರದ ಮಲ್ಕಾಪುರದಲ್ಲಿ ಐಡಿಬಿಐ ಬ್ಯಾಂಕ್ ಅಧಿಕಾರಿಯನ್ನು ಥಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

‘ಫ್ಯಾಕ್ಟ್ಲಿ’  ತಂಡ, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಐಡಿಬಿಐ ಮಲ್ಕಾಪುರ ಶಾಖಾ ವ್ಯವಸ್ಥಾಪಕ ಅನಿಲ್ ಸಾವ್ಲೆ ಅವರನ್ನು ಸಂಪರ್ಕಿಸಿದಾಗ, ಅವರು ಇತ್ತೀಚೆಗಷ್ಟೇ ಮಲ್ಕಾಪುರದ ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕರಾಗಿ ನೇಮಕಗೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಗೆ ಅವರು ಯಾವುದೇ ರಾಜಕೀಯ ಪಕ್ಷವನ್ನು ದೂಷಿಸದಿದ್ದರೂ, ರೈತರಿಗೆ ಬೆಳೆ ಸಾಲವನ್ನು ಮಂಜೂರು ಮಾಡುವಲ್ಲಿ ವಿಳಂಬವಾಗಿದ್ದ ಕಾರಣಕ್ಕಾಗಿ ಮಾಜಿ ಶಾಖಾ ಮುಖ್ಯಸ್ಥರ ಮೇಲೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಮಲ್ಕಾಪುರ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸ್ಮಿತಾ ಮಸಾಯೆ ಅವರನ್ನು ಸಂಪರ್ಕಿಸಿದಾಗ, ಮಲ್ಕಾಪುರ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು,  ಶಿವಸೇನೆಯ ಕಾರ್ಯಕರ್ತರು ಅಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ‘ರೈತರಿಗೆ ಬೆಳೆ ಸಾಲ ವಿಳಂಬವಾದ ಆರೋಪದ ಮೇಲೆ, ಯುವ ಕಾಂಗ್ರೆಸ್ ಕಾರ್ಯಕರ್ತರು ‘24 ಆಗಸ್ಟ್ 2020 ರಂದು’ ಐಡಿಬಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕರ ಮೇಲೆ, ಬ್ಯಾಂಕಿನ ಅವರ ಕಚೇರಿಯಲ್ಲಿ ಹಲ್ಲೆ ನಡೆಸಿದ್ದಾರೆ. ಈ ಘಟನೆಗೂ ಶಿವಸೇನೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಮಿತಾ ಮಸಾಯೆ ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆನಡೆಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.  ಶಿವಸೇನೆ ಪಕ್ಷದ ಕಾರ್ಯಕರ್ತರಲ್ಲ.