ಭಾರತ ಸರ್ಕಾರ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಅಥವಾ ನಿರಾಕರಣೆ ನೀಡುವಂತೆ ಮಾಡಲು ಯಾವುದೇ ಮಿಸ್ಡ್ ಕಾಲ್ ಉಪಕ್ರಮವನ್ನು ಪ್ರಾರಂಭಿಸಲಿಲ್ಲ

ಪ್ರಧಾನಿ ಮೋದಿಯವರ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬಲವಾಗಿ ಪ್ರತಿಪಾದಿಸುತ್ತಿರುವ ಇತ್ತೀಚಿನ ಕೆಲ ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರಚೋದಿಸುತ್ತಿವೆ  ಎಂದು ವಿರೋಧ ಪಕ್ಷಗಳು ಟೀಕಿಸಿದ ಹಿನ್ನೆಲೆಯಲ್ಲಿ, ಯುಸಿಸಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಬಯಸುವ ಹಿಂದೂಗಳು ‘9090902024’ ಗೆ ಮಿಸ್ಡ್ ಕಾಲ್ ನೀಡಬೇಕು ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಕ್ಲೈಮ್‌ನ ಮೂಲಕ ನಿಜಾಂಶವನ್ನು ಪರಿಶೀಲಿಸೋಣ.

ಕ್ಲೇಮ್:  ಏಕರೂಪ ನಾಗರಿಕ ಸಂಹಿತೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಬಯಸುವ ಹಿಂದೂಗಳು ‘9090902024’ ಗೆ ಮಿಸ್ಡ್ ಕಾಲ್ ನೀಡಬೇಕು.

 ಫ್ಯಾಕ್ಟ್: ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಅಥವಾ ವಿರೋಧವನ್ನು ವ್ಯಕ್ತಪಡಿಸಲು ಭಾರತ ಸರ್ಕಾರವು ಯಾವುದೇ ಮಿಸ್ಡ್ ಕಾಲ್ ಉಪಕ್ರಮವನ್ನು ಪ್ರಾರಂಭಿಸಿಲ್ಲ. ಯಾರು ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ಯುಸಿಸಿಯ  ಕಾನೂನು ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಥವಾ ಭಾರತದ ಕಾನೂನು ಆಯೋಗಕ್ಕೆ ಇ-ಮೇಲ್ ಕಳುಹಿಸುವ ಮೂಲಕ ತಮ್ಮ ನಿಲುವನ್ನು  ಹಂಚಿಕೊಳ್ಳಬಹುದು. ಇದಲ್ಲದೆ, ‘9090902024’ ಸಂಖ್ಯೆಯನ್ನು 2024 ರ ಲೋಕಸಭೆ ಚುನಾವಣೆಯ ಬಿಜೆಪಿ ಪ್ರಚಾರಕ್ಕೆ ಲಿಂಕ್ ಮಾಡಲಾಗಿದೆ, ಈ  ಮೂಲಕ ಬಳಕೆದಾರರು ಮೋದಿ ಸರ್ಕಾರದ ಒಂಬತ್ತು ವರ್ಷಗಳ ಬೆಂಬಲವನ್ನು ತೋರಿಸಲು ಮಿಸ್ಡ್ ಕಾಲ್ ನೀಡಬಹುದು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಡಿದಾಗ, ಬಿಜೆಪಿ 2024 ರ ಲೋಕಸಭೆ ಚುನಾವಣೆಯ ತಯಾರಿಗಾಗಿ ‘9090902024’ ಸಂಖ್ಯೆಯನ್ನು ‘ಜನ ಸಂಪರ್ಕ್ ಸೇ ಜನ್ ಸಮರ್ಥನ್’ ಎಂಬ ಅಭಿಯಾನಕ್ಕಾಗಿ ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ. ಒಂಬತ್ತು ವರ್ಷಗಳ ಬಿಜೆಪಿ ಸರ್ಕಾರದ ಬೆಂಬಲವನ್ನು ಪ್ರದರ್ಶಿಸಲು ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವಂತೆ ಅಭಿಯಾನವು ಬಳಕೆದಾರರಳ್ಳಿ ತಿಳಿಸಿದೆ.

ಇದರ ಜೊತೆಗೆ, ಈ ಸಮರ್ಥನೆಯನ್ನು ಪರಿಶೀಲಿಸಲು, ‘9090902024’ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಾವೇ ಅದನ್ನು ಪರೀಕ್ಷಿಸಿದ್ದೇವೆ. ಹಾಗೆ ಮಾಡಿದ ನಂತರ, ಮೋದಿ ಸರ್ಕಾರದ 9 ವರ್ಷಗಳ ಬೆಂಬಲಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸುವ ಸಂದೇಶ/ ಮೆಸೇಜ್ ನಮಗೆ ಬಂದಿದೆ. ಈ ಸಂಖ್ಯೆಯು ಮೊದಲೇ ಹೇಳಿದಂತೆ  ಬಿಜೆಪಿ ಅಭಿಯಾನಕ್ಕೆ ಸೃಷ್ಟಿಸಿದ್ದಾರೆಯೇ ಹೊರತು ಏಕರೂಪ ನಾಗರಿಕ ಸಂಹಿತೆಗಲ್ಲ(UCC) ಎಂಬುದು ಖಚಿತವಾಗಿದೆ.

ಅಲ್ಲದೇ, ಭಾರತದ ಕಾನೂನು ಆಯೋಗವು  ಜೂನ್ 14, 2023 ರಂದು ಏಕರೂಪ ನಾಗರಿಕ ಸಂಹಿತೆಯ ಕುರಿತು ಸಾರ್ವಜನಿಕ ಸೂಚನೆಯನ್ನು ನೀಡಿದೆ. ಮುಂಬರುವ 30 ದಿನಗಳಲ್ಲಿ ಯುಸಿಸಿ  ಸಾಮಾನ್ಯ ಜನರು, ರಾಜಕೀಯ ಪಕ್ಷಗಳು ಮತ್ತು ಇತರರಿಂದ ಕಾಮೆಂಟ್‌ಗಳನ್ನು ಕೇಳಿದೆ. ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಸಕ್ತಿಯುಳ್ಳ ಮತ್ತುಇಚ್ಛಿಸುವವವರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ತಿಳಿಸಬಹುದಾಗಿದೆ ಇಲ್ಲವೇ  ಭಾರತೀಯ ಕಾನೂನು ಆಯೋಗದ membersecretary-lci@gov.in ಗೆ  ಇಮೇಲ್ ಕಳುಹಿಸುವ ಮೂಲಕ ಇದನ್ನು ಮಾಡಬಹುದಾಗಿದೆ ಎಂದು ತಿಳಿಸಿದೆ. 

ಏಕರೂಪ ನಾಗರಿಕ ಸಂಹಿತೆಗೆ ಕೆಲವು ಫೋನ್ ಸಂಖ್ಯೆಗಳು  ತಪ್ಪಾಗಿ ಲಿಂಕ್ ಮಾಡಲಾಗಿದೆ ಎನ್ನುವ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಭಾರತದ ಕಾನೂನು ಆಯೋಗವು  ಇದಕ್ಕೆ ಯಾವುದೇ ಸಂಬಂಧವಿಲ್ಲೆಂದು ನೋಟಿಸ್ ನೀಡಿದೆ. ಯಾರು ಬೇಕಾದರೂ ಕಾನೂನು ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ  ಅಥವಾ ಭಾರತದ ಕಾನೂನು ಆಯೋಗಕ್ಕೆ ಇಮೇಲ್ ಕಳುಹಿಸುವ ಮೂಲಕ ತಮ್ಮ ಏಕರೂಪ ನಾಗರಿಕ ಸಂಹಿತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಅಥವಾ ವಿರೋಧವನ್ನು ವ್ಯಕ್ತಪಡಿಸಲು ಮಿಸ್ಡ್ ಕಾಲ್ ನೀಡುವ ಯಾವುದೇ  ಕ್ರಮವನ್ನು ಭಾರತ ಸರ್ಕಾರ ಪ್ರಾರಂಭಿಸಿಲ್ಲ.