Fake News - Kannada
 

ಪೆಟ್ರೋಲ್ ಬೆಲೆ ಬಗ್ಗೆ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಕುಳಿತುಕೊಳ್ಳಲು ಪಿಎಂ ಮೋದಿ ಹೇಳಿದರು ಎಂಬ ಎಡಿಟ್ ಮಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ

0

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಸಂವಾದ ನಡೆಸುತ್ತಿದ್ದಾಗ, ಪೆಟ್ರೋಲ್ ಬೆಲೆ ಬಗ್ಗೆ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಕುಳಿತುಕೊಳ್ಳಲು ಹೇಳುತ್ತಾರೆ ಮತ್ತು ಗೊಂದಲಮಯ ಉತ್ತರ ನೀಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಲೈವ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಇಂಧನ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಕುಳಿತುಕೊಳ್ಳುವಂತೆ ನರೇಂದ್ರ ಮೋದಿ ಹೇಳುವ ವಿಡಿಯೋ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಎಡಿಟ್ ಮಾಡಿರುವುದಾಗಿದೆ. ಮೂಲ ವೀಡಿಯೊದಲ್ಲಿ, ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸುವ ವ್ಯಕ್ತಿ ಪೆಟ್ರೋಲ್ ಬೆಲೆಗಳ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪಿಎಂ ನರೇಂದ್ರ ಮೋದಿ ಅವರು ವೀಡಿಯೊದಲ್ಲಿರುವ ವ್ಯಕ್ತಿಯನ್ನು ಹರಿಭೌ ಹೆಸರಿನೊಂದಿಗೆ ಕರೆಯುವುದನ್ನು ನಾವು ಕೇಳಬಹುದು. ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಈ ವೀಡಿಯೊ ಸಂವಾದಕ್ಕಾಗಿ ಹುಡುಕಿದಾಗ, 2018 ರಲ್ಲಿ ‘ಎಬಿಪಿ ಮಜಾ’ ಸುದ್ದಿ ಚಾನೆಲ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೋದಲ್ಲಿ ಇದೇ ರೀತಿಯ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದಲ್ಲಿ, ನರೇಂದ್ರ ಮೋದಿಯವರೊಂದಿಗೆ ಮಾತನಾಡುವ ವ್ಯಕ್ತಿಯು ಪಿಎಂ ಮುದ್ರಾ ಯೋಜನೆಯ ಫಲಾನುಭವಿ ಎಂದು ವರದಿಯಾಗಿದೆ (ಪಿಎಂಎಂವೈ). ಪಿಎಂ ನರೇಂದ್ರ ಮೋದಿ ಅವರು ಈ ಮುದ್ರಾ ಯೋಜನೆಯ ಫಲಾನುಭವಿ ಹರಿಭೌ ಅವರೊಂದಿಗೆ ಮರಾಠಿ ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಪಿಎಂ ಮೋದಿಯವರ ಈ ಸಂವಾದದ ಸಂಪೂರ್ಣ ವೀಡಿಯೊವನ್ನು ‘ಪಿಎಂಒ ಇಂಡಿಯಾ’ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೂಲ ವೀಡಿಯೊದಲ್ಲಿನ ‘ನಮಸ್ತೆ ಸರ್’ ಮತ್ತು ‘ಥೀಕ್ ಹೇ ಸಾಬ್’ ಪದಗಳನ್ನು ತೆಗೆದು ಕ್ರಮವಾಗಿ ‘ರಾಮ್ ರಾಮ್’ಮತ್ತು ‘ಪೆಟ್ರೋಲ್ ಕೆ ಭಾವ್’ ಪದಗಳೊಂದಿಗೆ ಬದಲಿಸಿ ಎಡಿಟ್ ಮಾಡಲಾಗಿದೆ. ಮೂಲ ವೀಡಿಯೊದಲ್ಲಿ ಹರಿಭೌ ಪೆಟ್ರೋಲ್ ಬೆಲೆ ಬಗ್ಗೆ ಏನನ್ನೂ ಮಾತನಾಡಿಲ್ಲ.

ಒಟ್ಟಿನಲ್ಲಿ ಮುದ್ರಾ ಯೋಜನೆಯ ಫಲಾನುಭವಿಯನ್ನು ಲೈವ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕುಳಿತುಕೊಳ್ಳಲು ಪಿಎಂ ಮೋದಿ ಹೇಳುವುದನ್ನು ಪೆಟ್ರೋಲ್ ದರದ ಪ್ರಶ್ನೆಗೆ ಹೇಳಿದ್ದಾರೆ ಎಂದು ತಪ್ಪಾಗಿ  ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll