ಕಲಬುರ್ಗಿಯಲ್ಲಿ ಜರುಗಿದ ಶೋಭಾ ಯಾತ್ರೆಯ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಉಜ್ಜಯಿನಿಯಲ್ಲಿ ನಡೆದಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಘೋಷಣೆ ಕೂಗಿದ್ದನ್ನು ವಿರೋಧಿಸಿ ಉಜ್ಜಯಿನಿಯಲ್ಲಿ ಮಸೀದಿ ಎದುರು ಒಟ್ಟುಗೂಡಿದ ಹಿಂದು ಸಮಾಜ ಎಂದು ವಿಡಿಯೋ ಇರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಡ ನೀವು ಕೇಳಬಹುದು. ಈ ಕುರಿತು ಸತ್ಯಾಸತ್ಯತೆ ತಿಳಿಯೋಣ.

ಪ್ರತಿಪಾದನೆ: ಮೊಹರಂ ದಿನದಂದು ಹಿಂದೂಗಳು ಉಜ್ಜಯಿನಿಯಲ್ಲಿ ರ್ಯಾಲಿ ಮಾಡಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ನಿಜಾಂಶ: ಈ ವಿಡಿಯೋ ಕರ್ನಾಟಕದ ಕಲಬುರ್ಗಿಯಲ್ಲಿ ನಡೆದ ಶೋಭಾ ಯಾತ್ರೆಗೆ ಸಂಬಂಧಿಸಿದ್ದಾಗಿದೆ. ಇದು 2018 ರಿಂದ ಅಂತರ್ಜಾಲದಲ್ಲಿ ಲಭ್ಯವಿದೆ. ಅಲ್ಲದೆ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ಈ ವೀಡಿಯೊ ಕುರಿತು ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ  ಹುಡುಕಿದಾಗ, ಮೇಲಿನ ಪೋಸ್ಟ್‌ನಲ್ಲಿನ ವೀಡಿಯೊದಲ್ಲಿರುವ ದೃಶ್ಯಗಳಂತೆಯೇ 30 ಸೆಕೆಂಡ್ ಉದ್ದದ ವೀಡಿಯೊವೊಂದು ದೊರಕಿದೆ. ಇದನ್ನು 2018 ರಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ಶೀರ್ಷಿಕೆಯ ಪ್ರಕಾರ, ಇದು 2018 ರಲ್ಲಿ ಕಲಬುರ್ಗಿಯಲ್ಲಿ ನಡೆದ ಶೋಭಾ ಯಾತ್ರೆಗೆ ಸಂಬಂಧಿಸಿದ್ದಾಗಿದೆ. 2018 ರಲ್ಲಿ ಕಲಬುರ್ಗಿಯಲ್ಲಿ ನಡೆದ ಶೋಭಾ ಯಾತ್ರೆ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್‌ನಲ್ಲಿ ಇದೇ ರೀತಿಯ ಹೈ ರೆಸಲ್ಯೂಶನ್ ವೀಡಿಯೋ ಕೂಡ ಇದೆ. ಅದರಲ್ಲಿನ ಪೊಲೀಸ್ ವಾಹನದ ಮೇಲೆ ಸ್ಪಷ್ಟವಾಗಿ ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್’ ಎಂದು ಬರೆಯಲಾಗಿದೆ.

ಈ ಹಿಂದೆ ಉಜ್ಜಯಿನಿಯಲ್ಲಿ ನಡೆದ ಹಿಂದೂ ಯಾತ್ರೆ ಎಂಬ ಹೆಸರಿನೊಂದಿಗೆ ಇದೇ ವಿಡಿಯೋವನ್ನು ವೈರಲ್ ಮಾಡಲಾಗಿತ್ತು. ಆಗ ಫ್ಯಾಕ್ಟ್ಲಿ ಫ್ಯಾಕ್ಟ್‌ಚೆಕ್ ಅದನ್ನು ಅಲ್ಲಗಳೆದಿತ್ತು ಮತ್ತು ಇದು ಕಲಬುರ್ಗಿಯಲ್ಲಿ ನಡೆದ ಶೋಭಾ ಯಾತ್ರೆ ಎಂದು ದೃಢಪಡಿಸಿತ್ತು. ಅದನ್ನು ಇಲ್ಲಿ ಓದಬಹುದು.

ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲವಾದರೂ, ಇದು ಕರ್ನಾಟಕದ ಕಲಬುರ್ಗಿಯಲ್ಲಿ  ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಖಚಿತವಾಗಿ ಹೇಳಬಹುದು. ಅಲ್ಲದೇ ಈ ವಿಡಿಯೋಗೂ ಉಜ್ಜಯಿನಿಗೂ  ಯಾವುದೇ ಸಂಬಂಧವಿಲ್ಲ ಎಂದು ಹೇಳಬಹುದು. ಈ ವಿಡಿಯೋದಲ್ಲಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ವಿಡಿಯೋವನ್ನು ಎಡಿಟ್ ಮಾಡಿ ಆಡಿಯೋ ಸೇರಿಸಲಾಗಿದೆ.

ಅಲ್ಲದೆ, ಉಜ್ಜಯಿನಿಯಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಹಿಂದುಗಳು ಮೆರವಣಿಗೆ ಮಾಡಿದ್ದರ ಬಗ್ಗೆ ಯಾವುದೇ ಸುದ್ದಿ ಲೇಖನಗಳು ಅಥವಾ ಇತರ ವರದಿಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ, ಕಲಬುರ್ಗಿಯಲ್ಲಿ ನಡೆದ ಶೋಭಾ ಯಾತ್ರೆಯ ಹಳೆಯ ವಿಡಿಯೋವನ್ನು ಉಜ್ಜಯಿನಿಯಲ್ಲಿ ನಡೆದಂತೆ ಡಿಜಿಟಲ್ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.