ಹರಿದ್ವಾರದಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಮಹಿಳೆಯ ಶವದ ಹಳೆಯ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಯುವತಿಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಹಿಂದೂ ಗೆಳತಿಯನ್ನು ಕೊಂದು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾರೆ (ಇಲ್ಲಿ) ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ಕೆಲವರು ಸೂಟ್‌ಕೇಸ್ ಪಕ್ಕದಲ್ಲಿ ಕುಳಿತಿದ್ದ ಯುವಕನನ್ನು ಮಹಿಳೆಯ ಶವದೊಂದಿಗೆ ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ವಿಡಿಯೋದಲ್ಲಿನ ಸೂಟ್‌ಕೇಸ್‌ನಲ್ಲಿ ಹಿಂದೂ ಹುಡುಗಿಯ ಮೃತ ದೇಹವಿದ್ದು, ಆಕೆಯ ಮುಸ್ಲಿಂ ಗೆಳೆಯ ಕೊಂದಿರುವುದಾಗಿ ಹೇಳಲಾಗಿದೆ. 

ಫ್ಯಾಕ್ಟ್: ಈ ಘಟನೆಯಲ್ಲಿ ಯಾವುದೇ ಕೋಮುಆಯಾಮವಿಲ್ಲ. ವೈರಲ್ ಆಗಿರುವ ವೀಡಿಯೊ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಪಿರಾನ್ ಕಲಿಯಾರ್ ಪ್ರದೇಶದ ಹೋಟೆಲ್‌ನಲ್ಲಿ ಮಾರ್ಚ್ 2022 ರಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ. ವರದಿಗಳು ಮತ್ತು ಪೊಲೀಸರ ಪ್ರಕಾರ, ಮೃತ ಹುಡುಗಿಯ ಹೆಸರು ರಂಶಾ, ಮತ್ತು ಆರೋಪಿಯ ಹೆಸರು ಗುಲ್ಜೇಬ್ ಹುಸೇನ್. ಆರೋಪಿ ಮತ್ತು ಮೃತೆ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

2022 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತೆಲುಗು ಭಾಷೆಯಲ್ಲಿ ಇದೇ ರೀತಿಯ ಕೋಮುವಾದದ ಹೇಳಿಕೆಯೊಂದಿಗೆ ವೈರಲ್ ಆದಾಗ ಅದೇ ವೀಡಿಯೊವನ್ನು ಫಾಕ್ಟ್ಲಿ ನಿರಾಕರಿಸಿ, ಫ್ಯಾಕ್ಟ್ ಚೆಕ್ ಮಾಡಲಾಗಿತ್ತು (ಇಲ್ಲಿ).

ವೈರಲ್ ಕ್ಲೇಮ್ ಅನ್ನು ಪರಿಶೀಲಿಸಲು ಮತ್ತು ವೀಡಿಯೊದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು, ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ಮಾರ್ಚ್ 2022 ರಲ್ಲಿ ಪ್ರಕಟವಾದ ಹಲವಾರು ಸುದ್ದಿ ವರದಿಗಳಿಗೆ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಗುಲ್ಜೆಬ್ ಹುಸೇನ್ ಎಂದು ಗುರುತಿಸಲಾದ ಆರೋಪಿ ಹರಿದ್ವಾರ ಜಿಲ್ಲೆಯ ಜ್ವಾಲಾಪುರದ ನಿವಾಸಿ ಮತ್ತು ಮೃತೆ ಹರಿದ್ವಾರದ ಮಂಗ್ಲೌರ್ ನಿವಾಸಿ ರಂಶಾ ಎಂದು ಹೇಳಲಾಗಿದೆ.

ಈ ವರದಿಗಳ ಪ್ರಕಾರ, ಯುವಕ ಮತ್ತು ಯುವತಿ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು.  ಮಾರ್ಚ್ 24, 2022 ರಂದು ರೂರ್ಕಿಯ ಪಿರನ್ ಕಲಿಯಾರ್‌ನಲ್ಲಿರುವ ಹೋಟೆಲ್‌ನಲ್ಲಿ ನಕಲಿ ಹೆಸರುಗಳನ್ನು ನೀಡಿ ಅಲ್ಲಿ ನೆಲೆಸಿದ್ದರು. ಕೆಲವು ಗಂಟೆಗಳ ನಂತರ, ಯುವಕ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಹೊರಬಂದನು, ಅದನ್ನು ಆತನಿಗೆ ಸರಿಯಾಗಿ ಎತ್ತಲು ಸಾಧ್ಯವಾಗಲಿಲ್ಲ. ಇದು ಹೋಟೆಲ್ ಸಿಬ್ಬಂದಿಗೆ ಅನುಮಾನಾಸ್ಪದವಾಗಿ ಕಂಡುಬಂದಿತು. ಅವರು ವ್ಯವಸ್ಥಾಪಕರಿಗೆ ಕರೆ ಮಾಡಿದರು. ತಪಾಸಣೆಯ ನಂತರ, ಅವರು ಸೂಟ್‌ಕೇಸ್‌ನೊಳಗೆ ಹುಡುಗಿಯ ಮೃತ ದೇಹವನ್ನು ಕಂಡುಕೊಂಡರು. ಹೋಟೆಲ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು, ಅವರು ಸ್ಥಳಕ್ಕೆ ಧಾವಿಸಿ ಹುಡುಗನನ್ನು ವಶಕ್ಕೆ ಪಡೆದರು. ಹರಿದ್ವಾರ ಎಸ್‌ಪಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಮಾಧ್ಯಮಗಳಿಗೆ ತಿಳಿಸಿದ್ದು, ಇವರಿಬ್ಬರು ಸುಮಾರು ಎಂಟು ವರ್ಷಗಳಿಂದ ಸಂಬಂಧದಲಿದ್ದು, ದೂರದ ಸಂಬಂಧಿಗಳಾಗಿದ್ದರು. ಆ ವ್ಯಕ್ತಿಯನ್ನು ಮದುವೆಯಾಗಲು ಹುಡುಗಿ ನಿರಾಕರಿಸಿದ್ದು ಈ ಕೊಲೆಗೆ ಕಾರಣವಾಯಿತು ಎಂದು ಈ ವರದಿಗಳು ತಿಳಿಸಿವೆ.

ನಂತರ ನಾವು ಉತ್ತರಾಖಂಡ ಪೊಲೀಸರ ಅಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಘಟನೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಪ್ರವೇಶಿಸಿದ್ದೇವೆ. ಎಫ್‌ಐಆರ್ ಪ್ರಕಾರ, ಆರೋಪಿಯ ಹೆಸರು ಗುಲ್ಜೇಬ್ ಮತ್ತು ಮೃತ ಹುಡುಗಿಯ ಹೆಸರು ರಾಂಶ,  ರಶೀದ್ ಅವರ ಮಗಳು. 2022 ರಲ್ಲಿ, ಇಂಡಿಯಾ ಟುಡೇ ಈ ಘಟನೆಯ ಬಗ್ಗೆ ಪಿರಾನ್ ಕಲಿಯಾರ್ ಪೊಲೀಸ್ ಠಾಣಾಧಿಕಾರಿ ಧರ್ಮೇಂದ್ರ ರಥಿ ಅವರನ್ನು ಸಂಪರ್ಕಿಸಿದ್ದರು. ಅವರು ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ, ಇಬ್ಬರೂ ದೂರದ ಸಂಬಂಧಿಗಳು ಮತ್ತು ಒಂದೇ ಧರ್ಮಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಆರೋಪಿ ಹುಡುಗನ ಹೆಸರು ಗುಲ್ಜೇಬ್ ಹುಸೇನ್ ಮತ್ತು ಮೃತೆ ಹುಡುಗಿಯ ಹೆಸರು ರಾಮ್ಶಾ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹರಿದ್ವಾರದಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಮಹಿಳೆಯ ಶವದ ಹಳೆಯ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.