ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ, 18 ಡಿಸೆಂಬರ್ 2025 ರಂದು ಬಾಂಗ್ಲಾದೇಶದ ಮೈಮನ್ಸಿಂಗ್ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವರ ದೇಹವನ್ನು ಸುಡಲಾಯಿತು. ಈ ದೂಷಣೆಯ ಆರೋಪವನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ಮತ್ತು RAB ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಮುಂದುವರಿದಂತೆ ಹಲವಾರು ಆರೋಪಿಗಳನ್ನು ಬಂಧಿಸಿ ರಿಮಾಂಡ್‌ನಲ್ಲಿ ಇರಿಸಲಾಗಿದೆ. ಈ ಕೊಲೆಯು ಬಾಂಗ್ಲಾದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಇದನ್ನು ಗುಂಪು ಹಿಂಸಾಚಾರ ಎಂದು ಖಂಡಿಸಿದ್ದಾರೆ ಮತ್ತು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).
ಈ ಘಟನೆಯ ನಂತರ, ದೀಪು ಚಂದ್ರ ದಾಸ್ ಸಾವನ್ನಪ್ಪುವ ಮೊದಲು ಬಾಂಗ್ಲಾದೇಶದ ಪೊಲೀಸರು ಅವರನ್ನು ಉಗ್ರಗಾಮಿಗಳಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಕ್ಲೈಮ್ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ (ಇಲ್ಲಿ). ಈ ಲೇಖನದಲ್ಲಿ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಈ ವಿಡಿಯೋ ದೀಪು ಚಂದ್ರ ದಾಸ್ ಸಾವನ್ನಪ್ಪುವ ಮೊದಲು ಬಾಂಗ್ಲಾದೇಶದ ಪೊಲೀಸರು ಅವರನ್ನು ಉಗ್ರಗಾಮಿಗಳಿಗೆ ಹಸ್ತಾಂತರಿಸುತ್ತಿರುವುದನ್ನು ತೋರಿಸುತ್ತದೆ.
ಫ್ಯಾಕ್ಟ್: ವೈರಲ್ ಆಗುತ್ತಿರುವ ಈ ವಿಡಿಯೋ ಬಾಂಗ್ಲಾದೇಶದ ಪೊಲೀಸರು ದೀಪು ಚಂದ್ರ ದಾಸ್ ಅವರನ್ನು ಉಗ್ರಗಾಮಿಗಳಿಗೆ ಹಸ್ತಾಂತರಿಸುತ್ತಿರುವುದನ್ನು ತೋರಿಸುವುದಿಲ್ಲ. ಈ ದೃಶ್ಯಗಳು ನವೆಂಬರ್ 2025 ರದ್ದಾಗಿದ್ದು, ಢಾಕಾದಲ್ಲಿ ಪೊಲೀಸರು ಢಾಕಾ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಅಲ್ಪಕಾಲ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದನ್ನು ತೋರಿಸುತ್ತದೆ. ಈ ವಿಡಿಯೋ ಕ್ಲಿಪ್ ಮೈಮನ್ಸಿಂಗ್ ಹತ್ಯೆಗಿಂತ ಹಲವಾರು ವಾರಗಳಷ್ಟು ಹಳೆಯದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.
ವೈರಲ್ ಆಗಿರುವ ವಿಡಿಯೋದ ಪ್ರಮುಖ ದೃಶ್ಯಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಮಗೆ ಅದೇ ವಿಡಿಯೋ ಕ್ಲಿಪ್ ಸಿಕ್ಕಿದೆ. ಇದನ್ನು ಬಾಂಗ್ಲಾದೇಶದ ಸುದ್ದಿ ಸಂಸ್ಥೆಯಾದ ‘ಭೋರೆರ್ ಕಾಗೋಜ್’ 18 ನವೆಂಬರ್ 2025 ರಂದು “ಈ ಢಾಕಾ ಕಾಲೇಜು ವಿದ್ಯಾರ್ಥಿಗೆ ಏನಾಯಿತು?” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿತ್ತು. ಇದರಿಂದ ಈ ವಿಡಿಯೋಗೂ ದೀಪು ಚಂದ್ರ ದಾಸ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ, ಏಕೆಂದರೆ ಈ ವಿಡಿಯೋ ಮೈಮನ್ಸಿಂಗ್ ಘಟನೆಗಿಂತ ಸುಮಾರು ಒಂದು ತಿಂಗಳು ಹಳೆಯದಾಗಿದೆ.
ವೈರಲ್ ಆಗಿರುವ ವಿಡಿಯೋದಿಂದ ಅಡಿಷನಲ್ ಫೂಟೇಜ್ ಈ ಮೂಲ ವಿಡಿಯೋದಲ್ಲಿವೆ. ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸುತ್ತಿರುವುದನ್ನು ಕಾಣಬಹುದು. ಇದೇ ಘಟನೆಯನ್ನು ಬೇರೆ ಆಂಗಲ್ ನಲ್ಲಿ ಚಿತ್ರೀಕರಿಸಿದ ಮತ್ತೊಂದು ವಿಡಿಯೋ ನಮಗೆ @dhakatoday_news ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಬಂದಿದೆ. ಆ ವಿಡಿಯೋಗೆ “ಪೊಲೀಸರಿಂದ ಏಟು ತಿಂದ ನಂತರ ಕಾಲೇಜು ವಿದ್ಯಾರ್ಥಿ ಅಳಲು ಪ್ರಾರಂಭಿಸಿದ” ಎಂಬ ಶೀರ್ಷಿಕೆ ನೀಡಲಾಗಿದೆ. ಈ ಎರಡೂ ವಿಡಿಯೋಗಳಲ್ಲಿ, ಆ ವ್ಯಕ್ತಿಯು ಬೆನ್ನಿನ ಮೇಲೆ ‘Momin‘ (ಮೊಮಿನ್) ಎಂದು ಹೆಸರಿರುವ ಜರ್ಸಿಯನ್ನು ಧರಿಸಿರುವುದು ಕಂಡುಬರುತ್ತದೆ.
ಆ ವ್ಯಕ್ತಿಯು ಧರಿಸಿದ್ದ ಟಿ-ಶರ್ಟ್‌ನ ಎಡಭಾಗದಲ್ಲಿ ಢಾಕಾ ಕಾಲೇಜಿನ ಲೋಗೋ ಮತ್ತು ಬಲಭಾಗದಲ್ಲಿ “Session 2022–23” ಎಂದು ಬರೆದಿರುವುದು ನಮಗೆ ಕಂಡುಬಂದಿದೆ. ಟಿ-ಶರ್ಟ್‌ನಲ್ಲಿರುವ ಈ ಲೋಗೋವನ್ನು ಢಾಕಾ ಕಾಲೇಜಿನ ಅಧಿಕೃತ ಲೋಗೋದೊಂದಿಗೆ ನಾವು ಹೋಲಿಕೆ ಮಾಡಿ ನೋಡಿದಾಗ, ಎರಡೂ ಒಂದೇ ಆಗಿರುವುದು ದೃಢಪಟ್ಟಿದೆ. ಈ ಹೋಲಿಕೆಯನ್ನು ಕೆಳಗೆ ನೋಡಬಹುದು.
22 ಡಿಸೆಂಬರ್ 2025 ರಂದು ಪ್ರಕಟಿಸಿದ X ಪೋಸ್ಟ್‌ನಲ್ಲಿ, ಬಾಂಗ್ಲಾದೇಶದ ಫ್ಯಾಕ್ಟ್ ಚೆಕರ್ ಒಬ್ಬರು ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ ಮತ್ತು ಇದನ್ನು ಸುಳ್ಳು ಕ್ಲೈಮ್ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ, ಢಾಕಾ ಕಾಲೇಜು ವಿದ್ಯಾರ್ಥಿಯ ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋವನ್ನು ತಪ್ಪಾಗಿ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.