ದೇಹದಾನ ಮಾಡಿದ ಸೀತಾರಾಮ್ ಎಚೂರಿ ಅವರಿಗೆ ವೈದ್ಯರು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಫೋಟೋ ಎಂದು ಚೀನಾದ ಹಳೆಯ ಫೋಟೋವನ್ನು ತಪ್ಪಾಗಿ ಶೇರ್ ಮಾಡಲಾಗುತ್ತಿದೆ

ದೇಹದಾನ ಮಾಡಿದ ಸೀತಾರಾಮ್ ಎಚೂರಿ ಅವರಿಗೆ ಡಾಕ್ಟರ್ಗಳು ಗೌರವ ವಂದನೆ ಸಲ್ಲಿಸುತ್ತಿರುವ ಫೋಟೋ ಎಂದು ಕೆಲವು ವೈದ್ಯರು ಮೃತದೇಹದ ಮುಂದೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಎಷ್ಟು ನಿಜ ಎಂಬುದನ್ನು ಈ ಮೂಲಕ ನೋಡೋಣ. 

ಕ್ಲೇಮ್: ದೇಹದಾನ ಮಾಡಿದ ಸೀತಾರಾಂ ಯೆಚೂರಿಗೆ ವೈದ್ಯರು ವಂದನೆ ಸಲ್ಲಿಸುತ್ತಿರುವ ಫೋಟೋ.

ಫ್ಯಾಕ್ಟ್: ಇದು ದೇಹದಾನ ಮಾಡಿದ ಸೀತಾರಾಂ ಯೆಚೂರಿ ಅವರಿಗೆ ವೈದ್ಯರು ವಂದನೆ ಸಲ್ಲಿಸುತ್ತಿರುವ ಫೋಟೋ ಅಲ್ಲ. 2016ರಲ್ಲಿ ಚೀನಾದ ಆಸ್ಪತ್ರೆಯೊಂದರಲ್ಲಿ ತೆಗೆದ ಫೋಟೋ. ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಡಾ. ಝಾವೊ ಕ್ಸು, 41, ವೈದ್ಯರ ಗುಂಪಿನೊಂದಿಗೆ ಸೇರಿ ಟಿಬೆಟ್ ಆಟೊನೊಮಸ್ ಪ್ರದೇಶದ ಷಾನನ್‌ನಲ್ಲಿ  ಕೆಲಸ ಮಾಡಲು ಮುಂದೆಬಂದರು. ಸೇವೆಯ ಸಮಯದಲ್ಲಿ ಅವರು ‘ಬ್ರೈನ್ ಅನೂರೈಸ್ಮ್’ ನಿಂದ ಬಳಲುತ್ತಿದ್ದು, ನಂತರ ಅದು ಅವರ ಸಾವಿಗೆ ಕಾರಣವಾಯಿತು. ಝಾವೋ ಅವರ ಕುಟುಂಬವು ಅವರ ಕೊನೆಯ ಆಸೆಗಳನ್ನು ಗೌರವಿಸಿ ಮತ್ತು ಅವರ ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಿದ್ದಾರೆ. ಅವರ ಸಹ ವೈದ್ಯರು ಅವರಿಗೆ ಕೊನೆಯ ನಮನವನ್ನು ಈ ರೀತಿ ಸಲ್ಲಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಸೀತಾರಾಮ್ ಎಚೂರಿ ಅವರು 12 ಸೆಪ್ಟೆಂಬರ್ 2024 ರಂದು ನವದೆಹಲಿಯ ಏಮ್ಸ್‌ನಲ್ಲಿ (ಇಲ್ಲಿ ಮತ್ತು ಇಲ್ಲಿ) ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾಗಿದ್ದಾರೆ. ಆದರೆ, ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ, ಈ ಫೋಟೋವನ್ನು 2020 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾಗಿದೆ  ಎಂದು ನಾವು ಗಮನಿಸಿದ್ದೇವೆ. 

ಈ ಫೋಟೋದ ಕುರಿತು ಮತ್ತಷ್ಟು ಹುಡುಕಾಡಿದಾಗ “ಚೀನೀ ಡಾಕ್ಟರ್ ಟಿಬೆಟ್‌ನಲ್ಲಿ ಸ್ವಯಂಸೇವಕರಾಗಿ ಸಾಯುತ್ತಿರುವಾಗ, ಅವರ ಅಂಗಗಳನ್ನು ದಾನ ಮಾಡುತ್ತಾರೆ” ಎಂದು  30 ಸೆಪ್ಟೆಂಬರ್ 2016 ರಂದು ಪ್ರಕಟವಾದ ಚೀನೀ ನ್ಯೂಸ್ ರಿಪೋರ್ಟ್ ನಮಗೆ ದೊರಕಿತು. ಈ ವರದಿಯ ಪ್ರಕಾರ, ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಡಾ. ಝಾವೊ ಕ್ಸು, 41, ವೈದ್ಯರ ಗುಂಪಿನೊಂದಿಗೆ ಸೇರಿ ಟಿಬೆಟ್ ಆಟೊನೊಮಸ್ ಪ್ರದೇಶದ ಷಾನನ್‌ನಲ್ಲಿ  ಕೆಲಸ ಮಾಡಲು ಮುಂದೆಬಂದರು. ಸೇವೆಯ ಸಮಯದಲ್ಲಿ ಅವರು ‘ಬ್ರೈನ್ ಅನೂರೈಸ್ಮ್’ ನಿಂದ ಬಳಲುತ್ತಿದ್ದು, ನಂತರ ಅದು ಅವರ ಸಾವಿಗೆ ಕಾರಣವಾಯಿತು. ಝಾವೋ ಅವರ ಕುಟುಂಬವು ಅವರ ಕೊನೆಯ ಆಸೆಗಳನ್ನು ಗೌರವಿಸಿ ಮತ್ತು ಅವರ ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಿದ್ದಾರೆ. 

ಚೀನಾದಲ್ಲಿ ಹೆಚ್ಚುತ್ತಿರುವ ಅಂಗಾಗದಾನದ ಪ್ರವೃತ್ತಿಯನ್ನು ಚರ್ಚಿಸುವ ವೆಬ್‌ಸೈಟ್ ಸಿಕ್ಸ್ತ್ ಟೋನ್‌ನ 2018 ರ ಲೇಖನದಲ್ಲಿ ಫೋಟೋವನ್ನು ಪ್ರಕಟಿಸಲಾಗಿದೆ. ಈ ಲೇಖನದ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಅಂಗಾಂಗ ದಾನಿಯೊಬ್ಬರಿಗೆ ವೈದ್ಯರು ಮತ್ತು ದಾದಿಯರು ಗೌರವ ಸಲ್ಲಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋವನ್ನು 29 ಸೆಪ್ಟೆಂಬರ್ 2016 ರಂದು ಅನ್ಹುಯಿ ಪ್ರಾಂತ್ಯದ ಹೆಫೆಯ ಆಸ್ಪತ್ರೆಯಲ್ಲಿ ರೋಗಿಯ ಬಳಸಬಹುದಾದ ಅಂಗಗಳನ್ನು ತೆಗೆದ ನಂತರ ತೆಗೆದುಕೊಳ್ಳಲಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಈ ಕುರಿತು ರಷ್ಯಾದ ಮಾಧ್ಯಮಗಳು ಸಹ ಪ್ರಕಟಿಸಿವೆ.

ಅಂತಿಮವಾಗಿ, ಚೀನಾದ ಹಳೆಯ ಫೋಟೋವನ್ನು ದೇಹ ದಾನ ಮಾಡಿದ ಸೀತಾರಾಮ್ ಯೆಚೂರಿಗೆ ವೈದ್ಯರು ವಂದನೆ ಸಲ್ಲಿಸುತ್ತಿರುವ ಫೋಟೋ ಎಂದು ಹಂಚಿಕೊಳ್ಳಲಾಗಿದೆ.