ಆಗಸ್ಟ್ 2025 ರಲ್ಲಿ ಗ್ಯಾಂಗ್ಟಾಕ್‌ನಲ್ಲಿ ನಡೆದ ‘ಹರ್ ಘರ್ ತಿರಂಗ’ ರಾಲಿಯ ವೀಡಿಯೊವನ್ನು ನೇಪಾಳದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸೆಪ್ಟೆಂಬರ್ 04, 2025 ರಂದು, ನೇಪಾಳ ಸರ್ಕಾರವು 26 ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಂಟ್ಫಾರ್ಮ್ ಅನ್ನು ನಿಷೇಧಿಸಿತ್ತು. ಇದು ದೇಶಾದ್ಯಂತ ಯುವ ನೇತೃತ್ವದ ಪ್ರತಿಭಟನೆಗಳಿಗೆ ಕಾರಣವಾಗಿ ಸೆಪ್ಟೆಂಬರ್ 08, 2025 ರಿಂದ ಹಿಂಸಾತ್ಮಕವಾಯಿತು.  ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ ಅಧ್ಯಕ್ಷರ ನಿವಾಸ ಸೇರಿದಂತೆ ಸರ್ಕಾರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಕನಿಷ್ಠ 72 ಜನರು ಸಾವನ್ನಪ್ಪಿದ್ದು,   2,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸೆಪ್ಟೆಂಬರ್ 09, 2025 ರಂದು ನಿಷೇಧವನ್ನು ತೆಗೆದುಹಾಕಿದರೂ, ಭ್ರಷ್ಟಾಚಾರ ಮತ್ತು ಅಸಮಾನತೆಯ ಕಾರಣ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಅದೇ ದಿನ ಹಲವಾರು ಮಂತ್ರಿಗಳೊಂದಿಗೆ, ಓಲಿ ರಾಜೀನಾಮೆ ನೀಡಿದರು. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಲಾಯಿತು, ಅವರು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ.  ಮಾರ್ಚ್ 05, 2026 ರಂದು ಹೊಸ ಚುನಾವಣೆಗಳು ನಿಗದಿಯಾಗಿವೆ. ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸೈನ್ಯವನ್ನು ನಿಯೋಜಿಸಲಾಯಿತು, ಆದರೆ ಮಧ್ಯಂತರ ಸರ್ಕಾರವು ಸಂತ್ರಸ್ತ್ರರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಘೋಷಿಸಿತು. ಇದರ ನಡುವೆ,  ಯುವಕರ ನೇತೃತ್ವದ ಗುಂಪುಗಳು ನೇಪಾಳದ ರಾಜಕೀಯ ನಿರ್ದೇಶನವನ್ನು ರೂಪಿಸುವುದನ್ನು ಮುಂದುವರೆಸಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಈ ಸಂದರ್ಭದಲ್ಲಿ, ರಾಲಿಯೊಂದರಲ್ಲಿ ಜನರ ಗುಂಪೊಂದು ಭಾರತೀಯ ಧ್ವಜವನ್ನು ಹಿಡಿದಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಹರಿದಾಡುತ್ತಿದೆ. ಈ ವೀಡಿಯೊ ನೇಪಾಳದಿಂದ ಬಂದಿದೆ ಎಂದು ಹೇಳಲಾಗುತ್ತಿದೆ, ಅಲ್ಲಿ ಭಾಗವಹಿಸುವವರು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ವೀಡಿಯೊದ ಹಿಂದಿನ ಸತ್ಯವನ್ನು ಪರಿಶೀಲಿಸೋಣ.

ಕ್ಲೇಮ್: ಈ ವೀಡಿಯೊ ನೇಪಾಳದಲ್ಲಿ ನಡೆದ ರಾಲಿಯಲ್ಲಿ ಭಾರತೀಯ ಧ್ವಜವನ್ನು ಹಿಡಿದು ಜನರು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ನೇಪಾಳದಲ್ಲಿ ನಡೆದ ರಾಲಿಯನ್ನು ತೋರಿಸುವುದಿಲ್ಲ. ಇದು ಆಗಸ್ಟ್ 12, 2025 ರಂದು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ನಡೆದ ‘ಹರ್ ಘರ್ ತಿರಂಗ’ ರಾಲಿಯನ್ನು ಚಿತ್ರಿಸುತ್ತದೆ, ಇದರಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತು ರಾಜ್ಯಪಾಲ ಒ.ಪಿ. ಮಾಥುರ್ ಭಾಗವಹಿಸಿದ್ದರು. ಎಂಜಿ ಮಾರ್ಗದಿಂದ ಮನನ್ ಕೇಂದ್ರಕ್ಕೆ ಮೆರವಣಿಗೆ ನಡೆಸಿದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.

ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳ ರಿವರ್ಸ್ ಇಮೇಜ್ ಹುಡುಕಾಟವು ಆಗಸ್ಟ್ 12, 2025 ರ ದಿನಾಂಕದ ಬಹು ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಈ ವರದಿಗಳು ವಿಭಿನ್ನ ಕೋನಗಳಿಂದ ಇದೇ ರೀತಿಯ ದೃಶ್ಯಗಳನ್ನು ಹೊಂದಿದ್ದು, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಜನರನ್ನು ಒಳಗೊಂಡಿದ್ದು, ಇದು ಸೆಪ್ಟೆಂಬರ್ 2025 ರ ನೇಪಾಳ ಪ್ರತಿಭಟನೆಗಿಂತ ಹಿಂದಿನದು ಎಂದು ದೃಢಪಡಿಸುತ್ತದೆ. ವರದಿಗಳ ಪ್ರಕಾರ, ಗ್ಯಾಂಗ್ಟಾಕ್ ಆಗಸ್ಟ್ 12, 2025 ರಂದು ‘ಹರ್ ಘರ್ ತಿರಂಗ’ ರಾಲಿಯೊಂದಿಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಆರಂಭವನ್ನು ಗುರುತಿಸಿತು. ರಾಜ್ಯಪಾಲ ಓಂ ಪ್ರಕಾಶ್ ಮಾಥುರ್, ಮುಖ್ಯಮಂತ್ರಿ ಪ್ರೇಮ್ ಸಿಂಗ್ ಗೋಲೆ, ಸಂಪುಟ ಸಚಿವರು, ಶಾಸಕರು, ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ರಾಲಿಯು ಎಂಜಿ ಮಾರ್ಗದಿಂದ ಪ್ರಾರಂಭವಾಗಿ ಮನನ್ ಕೇಂದ್ರದಲ್ಲಿ ಕೊನೆಗೊಂಡಿದೆ ಅಂದರೆ  ಸುಮಾರು ಒಂದು ಕಿಲೋಮೀಟರ್ ಕ್ರಮಿಸಿತು.

ನಂತರ ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಆಗಸ್ಟ್ 12, 2025 ರ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ, ಅದರಲ್ಲಿ ಅವರು ರಾಲಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಕಾರ್ಯಕ್ರಮದ ಹಲವಾರು ಫೋಟೋಗಳು ಸಹ ಕಂಡುಬಂದವು. ಈ ಫೋಟೋಗಳಲ್ಲಿ, ಪ್ರೇಮ್ ಸಿಂಗ್ ತಮಾಂಗ್ ಬಿಳಿ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು, ಆದರೆ ಸಿಕ್ಕಿಂ ರಾಜ್ಯಪಾಲ ಒ.ಪಿ. ಮಾಥುರ್ ನೆಹರೂ ಜಾಕೆಟ್ ಧರಿಸಿರುವುದನ್ನು ಕಾಣಬಹುದು – ವೈರಲ್ ವೀಡಿಯೊದಲ್ಲಿ ಇಬ್ಬರೂ ಒಂದೇ ರೀತಿಯ ಉಡುಪನ್ನು ಧರಿಸಿರುವುದು ಕಂಡುಬರುತ್ತದೆ.

ವೈರಲ್ ವಿಡಿಯೋ, ಸುದ್ದಿ ವರದಿಗಳು ಮತ್ತು ಸಿಎಂ ಪ್ರೇಮ್ ಸಿಂಗ್ ತಮಾಂಗ್ ಅವರ ಫೇಸ್‌ಬುಕ್ ಪೋಸ್ಟ್‌ನ ದೃಶ್ಯಗಳ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ.

ಸಿಕ್ಕಿಂ ಸರ್ಕಾರದ ಅಫೀಷಿಯಲ್ ಪೇಜ್,  ಆಗಸ್ಟ್ 12, 2025 ರಂದು ಪೋಸ್ಟ್ ಮಾಡಿದ್ದ ಫೇಸ್‌ಬುಕ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಈ ಘಟನೆಯನ್ನು ಬಗ್ಗೆ ತಿಳಿಸಿದ್ದು, ರಾಲಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗ್ಯಾಂಗ್‌ಟಾಕ್‌ನಲ್ಲಿ ನಡೆದ ‘ಹರ್ ಘರ್ ತಿರಂಗಾ’ ರಾಲಿಯ ಆಗಸ್ಟ್ 2025 ರ ವೀಡಿಯೊವನ್ನು ನೇಪಾಳದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.