ಬಾಂಡಿ ಬೀಚ್ ಭಯೋತ್ಪಾದನಾ ದಾಳಿಯ ನಂತರ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸುವುದಾಗಿ ಹೇಳಲಾಗುತ್ತಿರುವ ಈ ವಿಡಿಯೋ AI-ಜನರೇಟೆಡ್ ಆಗಿದೆ

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಬಾಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ನಂತರ ಆಸ್ಟ್ರೇಲಿಯಾವು ಎಲ್ಲಾ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ ಎಂಬ ಕ್ಲೈಮ್ ಮಾಡಲಾಗುತ್ತಿದೆ. ಈ ಕ್ಲಿಪ್‌ನಲ್ಲಿ ಅಲ್ಬನೀಸ್ ಅವರು ಈ ನಿರ್ಧಾರವನ್ನು ಪ್ರಕಟಿಸುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ ಅವರು, ‘ಇಂದಿನ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ನವೀದ್ ಅಕ್ರಮ್‌ನನ್ನು ಬಂಧಿಸಲಾಗಿದೆ. ಆಸ್ಟ್ರೇಲಿಯಾವು ಈ ಕೂಡಲೇ ಪಾಕಿಸ್ತಾನಿಗಳ ಎಲ್ಲಾ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ,’ ಎಂದು ಹೇಳುತ್ತಿರುವುದನ್ನು ಕಾಣಬಹುದು. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.


ಕ್ಲೇಮ್: ಬಾಂಡಿ ಬೀಚ್ ಭಯೋತ್ಪಾದನಾ ದಾಳಿಯ ನಂತರ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಎಲ್ಲಾ ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ವಿಡಿಯೋ.

ಫ್ಯಾಕ್ಟ್: ವೈರಲ್ ಆಗಿರುವ ಈ ವಿಡಿಯೋ ಎಐ-ಜನರೇಟೆಡ್ ಡೀಪ್‌ಫೇಕ್ ಆಗಿದೆ. ಇದರ ಆಡಿಯೋವನ್ನು AI ಬಳಸಿ ಸೃಷ್ಟಿಸಲಾಗಿದೆಯೇ ಹೊರತು, ಇದು ಆಂಥೋನಿ ಅಲ್ಬನೀಸ್ ಅವರು ಹೇಳಿದ ಮಾತುಗಳಲ್ಲ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ

ಈ ಕ್ಲೇಮ್ ಅನ್ನು ಪರಿಶೀಲಿಸಲು, ಬಾಂಡಿ ಬೀಚ್ ದಾಳಿಯ ನಂತರ ಆಂಥೋನಿ ಅಲ್ಬನೀಸ್ ಅವರು ಇಂತಹ ಯಾವುದೇ ಘೋಷಣೆ ಮಾಡಿದ್ದಾರೆಯೇ ಎಂದು ತಿಳಿಯಲು ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದೆವು. ಈ ಹುಡುಕಾಟದಲ್ಲಿ ಈ ಕ್ಲೈಮ್ ಅನ್ನು ಖಚಿತಪಡಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ. ದಾಳಿಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲೂ ಅವರು ಇಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ನಮಗೆ ತಿಳಿದುಬಂದಿದೆ (ಇಲ್ಲಿ ಮತ್ತು ಇಲ್ಲಿ). ಆದರೆ ಆರೋಪಿಗಳಲ್ಲಿ ಒಬ್ಬನಾದ ನವೀದ್ ಅಕ್ರಮ್‌ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸುವ ಸುದ್ದಿ ವರದಿಗಳು ನಮಗೆ ಲಭ್ಯವಾಗಿವೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

ಇದಲ್ಲದೆ, ಈ ವಿಡಿಯೋದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ನಾವು ಅದರಿಂದ ಪ್ರಮುಖ ಫ್ರೇಮ್‌ಗಳನ್ನು  ಹೊರತೆಗೆದು ‘ರಿವರ್ಸ್ ಇಮೇಜ್ ಸರ್ಚ್’ ನಡೆಸಿದೆವು. ಇದು ನಮ್ಮನ್ನು 2022 ರ ಮಾಧ್ಯಮ ವರದಿಗಳತ್ತ ಕೊಂಡೊಯ್ದಿತು; ಅಲ್ಲಿರುವ ಫೋಟೋಗಳು ವೈರಲ್ ಕ್ಲಿಪ್‌ನಲ್ಲಿರುವ ದೃಶ್ಯಗಳಿಗೆ ಹೋಲಿಕೆಯನ್ನು ಹೊಂದಿವೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಅಂತಹ ಒಂದು ವರದಿಯನ್ನು 3 ಆಗಸ್ಟ್ 2022 ರಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪ್ರಕಟಿಸಿತ್ತು. ಇದು ಸಂಸತ್ತಿನಲ್ಲಿ ಪ್ರಸ್ತಾಪಿಸಲಾದ ‘ಇಂಡಿಜಿನಸ್ ವಾಯ್ಸ್’ ಕುರಿತಾದ ಚರ್ಚೆಯನ್ನು ಒಳಗೊಂಡಿತ್ತು. ಆ ವರದಿಯಲ್ಲಿದ್ದ ಫೋಟೋವು ವೈರಲ್ ವಿಡಿಯೋದಲ್ಲಿ ಕಂಡುಬರುವ ಹಿನ್ನೆಲೆ, ಅವರ ಉಡುಪು ಮತ್ತು ಭಂಗಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಇದಲ್ಲದೆ, ನಾವು ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಅಲ್ಬನೀಸ್ ಅವರ ತುಟಿಗಳ ಚಲನೆ ಮತ್ತು ಅದಕ್ಕೆ ಪೂರಕವಾಗಿರುವ ಆಡಿಯೋ ನಡುವೆ ಅಸಮಂಜಸತೆ ಇರುವುದನ್ನು ಗಮನಿಸಿದೆವು. ಧ್ವನಿಯು ಕೂಡ ಅಸ್ವಾಭಾವಿಕವಾಗಿ ಕೇಳಿಸುತ್ತಿದ್ದು, ಈ ಕ್ಲಿಪ್ ಅನ್ನು AI ಪರಿಕರಗಳನ್ನು ಬಳಸಿ ಸೃಷ್ಟಿಸಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು.

ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ‘ಹಯಾಸ್ ಡೀಪ್‌ಫೇಕ್ ಆಡಿಯೋ ಡಿಟೆಕ್ಟರ್‘ ಬಳಸಿ ವಿಡಿಯೋವನ್ನು ವಿಶ್ಲೇಷಿಸಿದೆವು. ಇದು ಆಡಿಯೋ ಟ್ರ್ಯಾಕ್ AI-ಜನರೇಟೆಡ್  ಎಂದು ಸೂಚಿಸಿದೆ. ಇದರಿಂದ ಇದು ಡೀಪ್‌ಫೇಕ್ ವಿಡಿಯೋವೇ ಹೊರತು ನೈಜ ದೃಶ್ಯವಲ್ಲ ಎಂಬುದು ಸಾಬೀತಾಗಿದೆ.

ಇದಲ್ಲದೆ, ನಾವು ಈ ವಿಡಿಯೋವನ್ನು AI ವಿಷಯ ಪತ್ತೆಹಚ್ಚುವ ಸಾಧನವಾದ ‘ಹೈವ್‘ ಮೂಲಕ ಪರೀಕ್ಷಿಸಿದೆವು; ಇದು ಶೇಕಡಾ 68.3 ರಷ್ಟು ಈ ವಿಡಿಯೋವನ್ನು AI-ಜನರೇಟೆಡ್ ಅಥವಾ ಡೀಪ್‌ಫೇಕ್ ಎಂದು ಗುರುತಿಸಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಆಸ್ಟ್ರೇಲಿಯಾವು ಪಾಕಿಸ್ತಾನಿಗಳ ಎಲ್ಲಾ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಘೋಷಿಸುತ್ತಿರುವ ಈ ವಿಡಿಯೋ ಒಂದು ಡೀಪ್‌ಫೇಕ್.