​ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರು ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿರುವ ನಿಜವಾದ ದೃಶ್ಯಗಳೆಂದು, AI ಬಳಸಿ ಸೃಷ್ಟಿಸಲಾದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾನೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ, 2025ರ ಡಿಸೆಂಬರ್ 18ರಂದು ಬಾಂಗ್ಲಾದೇಶದ ಮೈಮೆನ್‌ಸಿಂಗ್ ಜಿಲ್ಲೆಯಲ್ಲಿ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹತ್ಯೆಗೈದು, ಶವವನ್ನು ರಸ್ತೆಯ ಮೇಲೆ ಸಜೀವ ದಹನ ಮಾಡಿದೆ. ಆದರೆ, ಆತನ ಮೇಲಿನ ದೈವನಿಂದನೆಯ ಆರೋಪಕ್ಕೆ ಪುಷ್ಟಿ ನೀಡುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಅಲ್ಲಿನ ಪೊಲೀಸರು ಮತ್ತು ರ್‍ಯಾಪಿಡ್ ಆಕ್ಷನ್ ಬೆಟಾಲಿಯನ್ (RAB) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಹಲವಾರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹತ್ಯೆಯು ಬಾಂಗ್ಲಾದೇಶ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿನ ಸರ್ಕಾರವು ಈ ಕೃತ್ಯವನ್ನು ‘ಮೂಕಹಿಂಸೆ’ ಎಂದು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ (ಇಲ್ಲಿ, ಇಲ್ಲಿ, ಇಲ್ಲಿ).

ಈ ಹಿನ್ನೆಲೆಯಲ್ಲಿ, ತಮ್ಮನ್ನು ಯಾರಾದರೂ ರಕ್ಷಿಸಿ ಎಂದು ಬಾಂಗ್ಲಾದೇಶದ ಹಿಂದೂ ಒಬ್ಬರು ಬೇಡಿಕೊಳ್ಳುತ್ತಿರುವ ದೃಶ್ಯಗಳೆಂದು ಹೇಳಲಾಗುತ್ತಿರುವ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಬೆಂಕಿಯ ಜ್ವಾಲೆಯಿಂದ ಆವೃತವಾಗಿರುವ ಕೆಲವು ಮನೆಗಳ ಮಧ್ಯೆ ನಿಂತಿರುವ ವ್ಯಕ್ತಿಯೊಬ್ಬರು ಮಾತನಾಡುತ್ತಾ, “ಇಲ್ಲಿ ಏನು ನಡೆಯುತ್ತಿದೆ ಎಂದು ನೀವೇ ನೋಡಬಹುದು, ನಮ್ಮನ್ನೂ ಸಹ ದೀಪು ಚಂದ್ರ ದಾಸ್ ಅವರಂತೆ ಕೊಂದು ಹಾಕುತ್ತಾರೆ” ಎಂದು ಹೇಳುತ್ತಿರುವುದನ್ನು ನಾವು ನೋಡಬಹುದು. ಅಸಲಿಗೆ, ಈ ಕ್ಲೇಮ್ ಹಿಂದೆ ಎಷ್ಟು ಸತ್ಯವಿದೆ ಎಂಬುದನ್ನು ಈ ಆರ್ಟಿಕಲ್ ಮೂಲಕ ನೋಡೋಣ.


ಕ್ಲೇಮ್: ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರು ಅಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ವೀಡಿಯೊ ಮೂಲಕ ತೋರಿಸುತ್ತಾ, ತಮ್ಮನ್ನು ರಕ್ಷಿಸುವಂತೆ ಕೋರುತ್ತಿರುವ ದೃಶ್ಯ.

ಫ್ಯಾಕ್ಟ್: ಇದು ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ವೀಡಿಯೊ ಆಗಿದ್ದು, ಬಾಂಗ್ಲಾದೇಶಿ ಹಿಂದೂ ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತಿರುವ ನಿಜವಾದ ವೀಡಿಯೊ ಅಲ್ಲ. ಇದು AI-ಜಿನರೇಟೆಡ್ ವೀಡಿಯೊ ಎಂದು AI ಕಂಟೆಂಟ್ ಡಿಟೆಕ್ಷನ್ ಟೂಲ್‌ಗಳು ಗುರುತಿಸಿವೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

ಕ್ಲೇಮ್ ಹಿಂದಿರುವ ನಿಜಾನಿಜಗಳನ್ನು ತಿಳಿದುಕೊಳ್ಳಲು, ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸರ್ಚ್ ಮೂಲಕ ನಮಗೆ ವೈರಲ್ ವೀಡಿಯೊ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ಲೇಖನಗಳಾಗಲಿ ಅಥವಾ ಆಧಾರಗಳಾಗಲಿ ಲಭ್ಯವಾಗಿಲ್ಲ. ಆದರೆ, ಈ ವೀಡಿಯೊದ ಅನ್-ಕ್ರಾಪ್ಡ್ ವರ್ಷನ್ ನಮಗೆ ‘X’ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಭಿಸಿದೆ.

ಆದರೆ, ಈ ವೀಡಿಯೊಗಳಿರುವ ಪೋಸ್ಟ್‌ಗಳ ಕೆಳಗೆ, ಕೆಲವು ಬಳಕೆದಾರರು ಇದು ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಲ್ಪಟ್ಟಿದೆ ಎಂದು ಹೇಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ವಿಷಯವನ್ನು ದೃಢೀಕರಿಸಲು ನಾವು ಈ ವೀಡಿಯೊವನ್ನು ಹೈವ್, ಡೀಪ್ ಫೇಕ್-ಓ-ಮೀಟರ್  ನಂತಹ AI ಕಂಟೆಂಟ್ ಡಿಟೆಕ್ಷನ್ ಟೂಲ್‌ಗಳನ್ನು ಬಳಸಿ ಪರಿಶೀಲಿಸಿದೆವು. ಇದು AI ಜಿನರೇಟೆಡ್ ವೀಡಿಯೊ ಎಂದು ಅವು ಎರಡೂ ಗುರುತಿಸಿವೆ (ಇಲ್ಲಿ, ಇಲ್ಲಿ).

ಇನ್ನು ಈ ವೀಡಿಯೊ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಅದನ್ನು ಬಳಸಿ ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸರ್ಚ್ ಮೂಲಕ ಇನ್‌ಸ್ಟಾಗ್ರಾಮ್ ಡಿಜಿಟಲ್ ಕ್ರಿಯೇಟರ್ ‘Kuldeep Meena’ ಈ ವೀಡಿಯೊವನ್ನು 24 ಡಿಸೆಂಬರ್ 2025 ರಂದು ಪೋಸ್ಟ್ ಮಾಡಿದ್ದಾನೆ ಎಂದು ನಮಗೆ ತಿಳಿದುಬಂದಿದೆ. ಇವನ ಪೇಜಿನಲ್ಲಿ ಇಂತಹ ಅನೇಕ AI-ಜಿನರೇಟೆಡ್ ವೀಡಿಯೊಗಳು ಇವೆ.

ಕೊನೆಯದಾಗಿ ಹೇಳುವುದಾದರೆ, ಒಬ್ಬ ಬಾಂಗ್ಲಾದೇಶಿ ಹಿಂದೂ ವ್ಯಕ್ತಿ ಅಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ವೀಡಿಯೊ ಮೂಲಕ ತೋರಿಸುತ್ತಾ, ತಮ್ಮನ್ನು ರಕ್ಷಿಸುವಂತೆ ಕೋರುತ್ತಿರುವ ವೀಡಿಯೊ ಒಂದು AI-ಜನರೇಟೆಡ್ ವಿಡಿಯೋವಾಗಿದೆ.