ವಕ್ಫ್ ಮಸೂದೆ ಅಂಗೀಕಾರದ ನಂತರ ಉತ್ತರಾಖಂಡದಲ್ಲಿ ನೋಂದಾಯಿಸದ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವ ವೀಡಿಯೊವನ್ನು ಯು.ಪಿ.ಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಇತ್ತೀಚೆಗೆ ಭಾರತದ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದವು. ಸುಮಾರು 12 ಗಂಟೆಗಳ ಚರ್ಚೆಯ ನಂತರ ಲೋಕಸಭೆಯು ಏಪ್ರಿಲ್ 02, 2025 ರಂದು ಮಸೂದೆಯನ್ನು ಅಂಗೀಕರಿಸಿತು, 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. 12 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆಯು ಏಪ್ರಿಲ್ 04, 2025 ರ ಬೆಳಗ್ಗೆ ಮಸೂದೆಯನ್ನು ಅಂಗೀಕರಿಸಿತು, 128 ಪರವಾಗಿ ಮತ್ತು 95 ವಿರುದ್ಧವಾಗಿ ಮತ ಚಲಾಯಿಸಿದರು. ಏಪ್ರಿಲ್ 05, 2025 ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ವಕ್ಫ್ ತಿದ್ದುಪಡಿ ಮಸೂದೆಗೆ ತಮ್ಮ ಒಪ್ಪಿಗೆಯನ್ನು ನೀಡಿದರು. ಇದರ ನಡುವೆ, ಮಸೂದೆ ಅಂಗೀಕಾರದ ನಂತರ ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಹರಿದಾಡುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ನಂತರ ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವಿಡಿಯೋ ಉತ್ತರಾಖಂಡದಾಗಿದ್ದು,   ವಕ್ಫ್ ತಿದ್ದುಪಡಿ ಮಸೂದೆಗಿಂತ ಹಿಂದಿನ ವೀಡಿಯೊವಾಗಿದೆ. ಭಗವಾನ್‌ಪುರದ ಅಧಿಕಾರಿಗಳು ಸ್ಥಳೀಯ ಆಡಳಿತಾತ್ಮಕ ಅಭಿಯಾನದ ಭಾಗವಾಗಿ ನೋಂದಾಯಿಸದ ಮದರಸಾಗಳನ್ನು ಪರಿಶೀಲಿಸುತ್ತಿರುವುದನ್ನು ಇದು ತೋರಿಸುತ್ತದೆ. ವೀಡಿಯೊದಲ್ಲಿರುವ  ಪೊಲೀಸ್ ಬ್ಯಾಡ್ಜ್ ಉತ್ತರ ಪ್ರದೇಶ ಪೊಲೀಸರದಲ್ಲ ಬದಲಾಗಿ  ಉತ್ತರಾಖಂಡ ಪೊಲೀಸರದಾಗಿದೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲು ಉತ್ತರಾಖಂಡ ಆಡಳಿತವು ನಡೆಸುತ್ತಿರುವ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ  ವಕ್ಫ್ ತಿದ್ದುಪಡಿ ಮಸೂದೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಲವಾರು ಸುದ್ದಿ ವರದಿಗಳು ದೃಢಪಡಿಸುತ್ತವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.  

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ರೂರ್ಕಿ ಹರಿದ್ವಾರ ಸಮಾಚಾರ್ ಎಂಬ ಫೇಸ್‌ಬುಕ್ ಪೇಜ್ ಮಾರ್ಚ್ 22, 2025 ರಂದು ಅಪ್‌ಲೋಡ್ ಮಾಡಿದ ಅದೇ ವೀಡಿಯೊ ನಮಗೆ ಲಭಿಸಿದೆ. ವೀಡಿಯೊದ ಕ್ಯಾಪ್ಶನ್ ನಲ್ಲಿ , “ಭಗವಾನ್‌ಪುರ ತಹಸಿಲ್ ಆಡಳಿತವು ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಸಾಗಳ ಬಗ್ಗೆ ತನಿಖೆ ನಡೆಸಿತು” ಎಂದು ನೀಡಲಾಗಿದೆ. ಆದರೆ ವೈರಲ್ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೂ ಮುಂಚೆಯೇ ಇತ್ತು ಎಂದು ಇದು ದೃಢಪಡಿಸುತ್ತದೆ.

ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಒಳಗೊಂಡ ಮತ್ತೊಂದು ವೀಡಿಯೊವನ್ನು ಮಾರ್ಚ್ 22, 2025 ರಂದು ಅದೇ ಫೇಸ್‌ಬುಕ್ ಪೇಜ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ವೀಡಿಯೊದಲ್ಲಿ ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿರುವ ಬ್ಯಾಡ್ಜ್‌ನಲ್ಲಿ “ಉತ್ತರಾಖಂಡ ಪೊಲೀಸ್” ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.

ವೈರಲ್ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿಯ ಬ್ಯಾಡ್ಜ್ ಅನ್ನು ನಾವು ಉತ್ತರಾಖಂಡ ಪೊಲೀಸರೊಂದಿಗೆ ಹೋಲಿಸಿದ್ದೇವೆ, ಇದು ವೈರಲ್ ವೀಡಿಯೊದಲ್ಲಿರುವ ಅಧಿಕಾರಿ ಉತ್ತರ ಪ್ರದೇಶ ಪೊಲೀಸರಲ್ಲ ಎಂದು ದೃಢಪಡಿಸಿದೆ.

ಪೋಸ್ಟ್‌ನಲ್ಲಿನ ಕ್ಲೂ ಅನ್ನು ಪಡೆದುಕೊಂಡು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿದ್ದೇವೆ. ಅದು ಮಾರ್ಚ್ 26, 2025 ರಂದು ಡಿಡಿ ನ್ಯೂಸ್ ಉತ್ತರಾಖಂಡ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ “ಹರಿದ್ವಾರದಲ್ಲಿ ಅಕ್ರಮ ಮದರಸಾಗಳ ವಿರುದ್ಧ ಆಡಳಿತದ ಕ್ರಮ ಮುಂದುವರೆದಿದೆ” ಎಂಬ ಕ್ಯಾಪ್ಶನ್ ನ ನ್ಯೂಸ್ ರಿಪೋರ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದಲ್ಲಿನ 1:23 ಟೈಮ್ ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಗುರುತಿಸಬಹುದು.

ಈ ಘಟನೆಯನ್ನು ಒಳಗೊಂಡ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿಸದ ಮದರಸಾಗಳನ್ನು ಮುಚ್ಚುವ ಅಭಿಯಾನವನ್ನು ಪ್ರಾರಂಭಿಸಿತ್ತು. ಮುಸ್ಲಿಂ ಸಂಘಟನೆಗಳು ಸಹ ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ, ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ನಂತರ ಉತ್ತರಾಖಂಡದಲ್ಲಿ ನೋಂದಾಯಿಸದ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವ ವೀಡಿಯೊವನ್ನು ಯು.ಪಿ.ಯ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.