ನಟರಂಗ್, ಗುಜರಾತ್‌ನ ಒಂದು ರ‍್ಯಾಲಿಯ ವೀಡಿಯೊವನ್ನು ಬಿಹಾರ ಚುನಾವಣೆಯ ಸಮಯದಲ್ಲಿ ನಡೆದ ಮತ ಕಳ್ಳತನದ ವಿರುದ್ಧದ ಪ್ರತಿಭಟನಾ ರ‍್ಯಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ನವೆಂಬರ್ 14, 2025 ರಂದು ಘೋಷಣೆಯಾಯಿತು. ಈ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದಿದೆ. ಫಲಿತಾಂಶಗಳ ನಂತರ, ವಿರೋಧ ಪಕ್ಷಗಳು ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅದು ಬಿಜೆಪಿಗೆ ಒಲವು ತೋರಿದೆ ಮತ್ತು ಮತ ಕಳ್ಳತನಕ್ಕೆ (ಇಲ್ಲಿ ಮತ್ತು ಇಲ್ಲಿ) ಅವಕಾಶ ನೀಡಿದೆ ಎಂದು ಆರೋಪಿಸಿವೆ.

​ಈ ಆರೋಪಗಳ ನಡುವೆ, ಒಂದು ದೊಡ್ಡ ಜನಸಮೂಹವು ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಆಡಳಿತ ಪಕ್ಷದ ವಿರುದ್ಧ ಮತ ಕಳ್ಳತನದ ಆರೋಪ ಹೊರಿಸುತ್ತಿರುವ ಬಿಹಾರದ ಮತದಾರರ ಪ್ರತಿಭಟನೆ ಎಂದು ಹೇಳಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ವೀಡಿಯೊವು 2025 ರ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ಮತ ಕಳ್ಳತನದ ವಿರುದ್ಧ ಬಿಹಾರದ ಮತದಾರರು ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ಬಿಹಾರದಿಂದ ಬಂದಿದ್ದಲ್ಲ. ಇದು ನವೆಂಬರ್ 15, 2025 ರಂದು ಗುಜರಾತ್‌ನ ನೆತ್ರಂಗ್‌ನಲ್ಲಿ, ಬಿರ್ಸಾ ಮುಂಡಾ ಅವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ಆಮ್ ಆದ್ಮಿ ಪಕ್ಷದ (AAP) ಶಾಸಕ ಚೈತರ್ ವಸಾವಾ ಅವರು ಆಯೋಜಿಸಿದ್ದ ರ‍್ಯಾಲಿಯನ್ನು ತೋರಿಸುತ್ತದೆ. ಗೂಗಲ್ ಸ್ಟ್ರೀಟ್ ವ್ಯೂ ಬಳಸಿ ಸ್ಥಳವನ್ನು ಹೊಂದಾಣಿಕೆ ಮಾಡುವುದರಿಂದ ಈ ದೃಶ್ಯಾವಳಿ ಬಿಹಾರದ್ದಲ್ಲ, ಬದಲಾಗಿ ನೇತ್ರಂಗ್‌ನದ್ದೇ ಎಂದು ದೃಢಪಡುತ್ತದೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಈ ಕ್ಲೇಮನ್ನು ಪರಿಶೀಲಿಸಲು, ಚುನಾವಣಾ ಆಯೋಗವು 2025 ರ ಫಲಿತಾಂಶಗಳನ್ನು ಘೋಷಿಸಿದ ನಂತರ ಬಿಹಾರದಲ್ಲಿ ಯಾವುದೇ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿವೆಯೇ ಎಂದು ಪರಿಶೀಲಿಸಲು ನಾವು ಮೊದಲು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ನವೆಂಬರ್ 19, 2025 ರವರೆಗೆ, ರಾಜ್ಯದಲ್ಲಿ ಅಂತಹ ಯಾವುದೇ ಪ್ರತಿಭಟನೆ ನಡೆದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಉಲ್ಲೇಖಿಸಿಲ್ಲ.

ಹೆಚ್ಚಿನ ತನಿಖೆಗಾಗಿ, ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮಗೆ chaitarvasava.army ಎಂಬ ಇನ್ಸ್ಟಾಗ್ರಾಮ್ ಅಕೌಂಟ್  ನವೆಂಬರ್ 15, 2025 ರಂದು ಪೋಸ್ಟ್ ಮಾಡಿದ ಅದೇ ದೃಶ್ಯಗಳನ್ನು ತೋರಿಸಿದೆ. ಆ ಪೋಸ್ಟ್‌ನ ಕ್ಯಾಪ್ಷನಲ್ಲಿ ವೀಡಿಯೊ ಗುಜರಾತ್‌ನ ನೇತ್ರಂಗ್‌ನಿಂದ ಬಂದಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. 

ಈ ರ‍್ಯಾಲಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ಸಂಬಂಧಿತ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಚೈತರ್ ವಸಾವಾ ಅವರು ಗುಜರಾತ್‌ನ ದೇಡಿಯಾಪಾಡಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ (AAP) ಶಾಸಕರಾಗಿದ್ದಾರೆ ಮತ್ತು ನೇತ್ರಂಗ್  ಎಂಬುದು ಭರೂಚ್ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದ್ದು, ಇದು ದೇಡಿಯಾಪಾಡಾ ಪಕ್ಕದಲ್ಲಿದೆ ಎಂದು ನಾವು ಕಂಡುಕೊಂಡೆವು. ಸುದ್ದಿ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಚೈತರ್ ವಸಾವಾ ಅವರು ಬಿರ್ಸಾ ಮುಂಡಾ ಅವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ನವೆಂಬರ್ 15, 2025 ರಂದು ನೇತ್ರಂಗ್‌ನಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದರು.

ಈ ಸ್ಥಳವನ್ನು  ದೃಢೀಕರಿಸಲು, ನಾವು ವೈರಲ್ ವೀಡಿಯೊವನ್ನು ಪರಿಶೀಲಿಸಿ, ಆ ಸ್ಥಳವನ್ನು ಗುಜರಾತ್‌ನ ನೇತ್ರಂಗ್‌ನಲ್ಲಿರುವ ಗ್ರಾಮ ಪಂಚಾಯತ್ ರಸ್ತೆ ಎಂದು ಗುರುತಿಸಿದ್ದೇವೆ. ವೈರಲ್ ದೃಶ್ಯಾವಳಿಯನ್ನು ಗೂಗಲ್ ಸ್ಟ್ರೀಟ್ ವ್ಯೂ ನೊಂದಿಗೆ ಹೋಲಿಸಿ ನೋಡುವುದರಿಂದ, ಇತರ ಪೂರಕ ಪುರಾವೆಗಳೊಂದಿಗೆ, ಈ ವೀಡಿಯೊ ಬಿಹಾರದಲ್ಲ, ಬದಲಾಗಿ ಗುಜರಾತಿನಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್‌ನ ನೇತ್ರಂಗ್‌ನಲ್ಲಿ ನಡೆದ ಒಂದು ರ‍್ಯಾಲಿಯ ವೀಡಿಯೊವನ್ನು ಬಿಹಾರ ಚುನಾವಣೆಯ ಸಮಯದಲ್ಲಿ ನಡೆದ ಮತ ಕಳ್ಳತನದ ಆರೋಪದ ವಿರುದ್ಧದ ಪ್ರತಿಭಟನಾ ರ‍್ಯಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.