ಕೇಂದ್ರ ಚುನಾವಣಾ ಆಯೋಗವು ಅಕ್ರಮ ಮತದಾರರ ಚೀಟಿಗಳನ್ನು ತೆಗೆದು ಹಾಕುತ್ತೇವೆ ಎಂದು ಘೋಷಿಸಿದ ಕೂಡಲೇ, ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳೆಂದು ಬಾಂಗ್ಲಾದೇಶದಲ್ಲಿ ತೆಗೆದ ವೀಡಿಯೊವನ್ನು ಶೇರ್ ಮಾಡಲಾಗುತ್ತಿದೆ

‘ಕೇಂದ್ರ ಚುನಾವಣಾ ಆಯೋಗವು ಅಕ್ರಮವಾಗಿ ಪಡೆದ ಮತದಾರರ ಚೀಟಿಗಳನ್ನು ತೆಗೆದು ಹಾಕುವುದಾಗಿ ಘೋಷಿಸಿದ ಕೂಡಲೇ, ‘ಬಂಗಾಳದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾಗಳು ರಸ್ತೆಗಿಳಿದು ಈ ರೀತಿ ಗಲಭೆ ಮಾಡುತ್ತಿದ್ದಾರೆ’ ಎಂದು ಹೇಳುವ ಒಂದು ವೀಡಿಯೊ (ಇಲ್ಲಿ)  ಸೋಶಿಯಲ್ ಮೀಡಿಯಾದಲ್ಲಿ   ಶೇರ್ ಆಗುತ್ತಿದೆ. ಈ ವೀಡಿಯೊದಲ್ಲಿ ಕೆಲವರು ರಸ್ತೆಯ ಮೇಲೆ ಘೋಷಣೆಗಳನ್ನು ಕೂಗುತ್ತಾ ನಡೆಯುವುದನ್ನು ನಾವು ನೋಡಬಹುದು. ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಹಂತ-2 ಅನ್ನು ನವೆಂಬರ್ 4, 2025 ರಂದು ಪ್ರಾರಂಭಿಸಿದ ಹಿನ್ನೆಲೆಯಲ್ಲಿ (ಇಲ್ಲಿ, ಇಲ್ಲಿ) ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದೆ.  ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಕೇಂದ್ರ ಚುನಾವಣಾ ಆಯೋಗವು ಅಕ್ರಮವಾಗಿ ಪಡೆದ ಮತದಾರರ ಚೀಟಿಗಳನ್ನು ತೆಗೆದು ಹಾಕುವುದಾಗಿ ಘೋಷಿಸಿದ (SIR) ಕೂಡಲೇ, ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ರಸ್ತೆಗೆ ಬಂದು ಪ್ರತಿಭಟನೆ ನಡೆಸುತ್ತಿರುವ ವೀಡಿಯೊ.

ಫ್ಯಾಕ್ಟ್: ಇದು ಬಾಂಗ್ಲಾದೇಶದಲ್ಲಿ ಚಿತ್ರೀಕರಿಸಿದ ವೀಡಿಯೊ. ಇದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪಶ್ಚಿಮ ಬಂಗಾಳದಲ್ಲಿ ನವೆಂಬರ್ 4, 2025 ರಂದು ಪ್ರಾರಂಭವಾಗುವ ಮೊದಲೇ, ಅಂದರೆ ಸೆಪ್ಟೆಂಬರ್ 15, 2025 ರಿಂದಲೇ ಈ ವೀಡಿಯೊ  ಇಂಟರ್ನೆಟ್ ನಲ್ಲಿ ಲಭ್ಯವಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿರುವ ಕ್ಲೈಮ್ ತಪ್ಪು.

ಈ ಕ್ಲೇಮ್ ನ ಹಿಂದಿರುವ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವೈರಲ್ ವೀಡಿಯೊದಲ್ಲಿನ ಕೆಲವು ಕೀಫ್ರೇಮ್‌ಗಳನ್ನು ಬಳಸಿ  ಇಂಟರ್ನೆಟ್ ನಲ್ಲಿ ಹುಡುಕಿದಾಗ, ಈ ವೀಡಿಯೊ ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ನಡೆಸಿದ ಪ್ರತಿಭಟನೆಯನ್ನು ತೋರಿಸುತ್ತದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ದೊರೆಯಲಿಲ್ಲ.

ಆದರೆ, ಈ ಹುಡುಕಾಟದ ಮೂಲಕ, ಈ ವೀಡಿಯೊ ನಮಗೆ ಸೆಪ್ಟೆಂಬರ್ 15, 2025 ರ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ (ಇಲ್ಲಿ, ಇಲ್ಲಿ) ಲಭ್ಯವಾಯಿತು. ಇದರಿಂದ, ಈ ವೀಡಿಯೊ ನವೆಂಬರ್ 4, 2025 ರಂದು ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ, ಮತ್ತು ಅಕ್ಟೋಬರ್ 27, 2025 ರಂದು ಚುನಾವಣಾ ಆಯೋಗವು SIR ನ ಹಂತ-2 ಅನ್ನು ಘೋಷಿಸುವ ಮೊದಲೇ  ಇಂಟರ್ನೆಟ್ ನಲ್ಲಿ ಇತ್ತು ಎಂಬುದು ನಮಗೆ ಅರ್ಥವಾಗುತ್ತದೆ.

ಈ ವೀಡಿಯೊದ ಉತ್ತಮ ಗುಣಮಟ್ಟದ  ವರ್ಷನ್ ಅನ್ನು ‘Biplob Biplob‘ ಎಂಬ ವ್ಯಕ್ತಿಯು ತನ್ನ ಫೇಸ್‌ಬುಕ್  ಪೇಜಿನಲ್ಲಿ ಸೆಪ್ಟೆಂಬರ್ 15, 2025 ರಂದು ಅಪ್‌ಲೋಡ್ ಮಾಡಿದ್ದಾರೆ. ಬಾಂಗ್ಲಾ ಭಾಷೆಯಲ್ಲಿರುವ ಈ ವೀಡಿಯೊದ ವಿವರಣೆಯನ್ನು ಕನ್ನಡಕ್ಕೆ ಭಾಷಾಂತರಿಸಿದಾಗ, ಅದು ‘ಇಂದಿನ  ಉದ್ಯಮದ ವೀಡಿಯೊ ತುಣುಕು’ ಎಂದಿದೆ. Biplob ತಮ್ಮ ಫೇಸ್‌ಬುಕ್  ಪೇಜಿನಲ್ಲಿ ತಾವು ಬಾಂಗ್ಲಾದೇಶದ ಢಾಕಾದಲ್ಲಿರುವ ಫರೀದ್‌ಪುರದ ನಿವಾಸಿ ಎಂದು ನಮೂದಿಸಿದ್ದಾರೆ.

ಈ ವೀಡಿಯೊ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿದ Biplob ಅವರು, ಈ ವೀಡಿಯೊವನ್ನು ಬಾಂಗ್ಲಾದೇಶದ ಫರೀದ್‌ಪುರ ಜಿಲ್ಲೆಯ ಭಾಂಗಾ ಎಂಬ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ಷೇತ್ರಗಳ ಮರುವಿಂಗಡಣೆ ಕುರಿತು ಬಾಂಗ್ಲಾದೇಶದ ಚುನಾವಣಾ ಆಯೋಗವು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ, ಭಾಂಗಾ ಉಪ-ಜಿಲ್ಲೆಯಲ್ಲಿ ಕೆಲವು ಪ್ರತಿಭಟನೆಗಳು ನಡೆದಿದ್ದವು ಎಂದು ಅವರು ಇಂಡಿಯಾ ಟುಡೇಗೆ ವಿವರಿಸಿದ್ದಾರೆ.

ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಾವು  ಇಂಟರ್ನೆಟ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಸೆಪ್ಟೆಂಬರ್ 2025 ರಲ್ಲಿ ಭಾಂಗಾ ಜನರು ಕ್ಷೇತ್ರಗಳ ಮರುವಿಂಗಡಣೆ ಕುರಿತು ಬಾಂಗ್ಲಾದೇಶದ ಚುನಾವಣಾ ಆಯೋಗವು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ವರದಿ ಮಾಡಿದ ಬಾಂಗ್ಲಾದೇಶದ ಸುದ್ದಿ ಲೇಖನಗಳು ನಮಗೆ ಲಭ್ಯವಾದವು (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ).

ಹೆಚ್ಚುವರಿಯಾಗಿ, ವೈರಲ್ ಆಗುತ್ತಿರುವ ಈ ಕ್ಲೈಮ್ ತಪ್ಪು ಎಂದು ಹೇಳುತ್ತಾ, ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ‘ಪ್ರೋಥೋಮ್ ಆಲೋ’ ಪ್ರಕಟಿಸಿದ ಒಂದು ಫ್ಯಾಕ್ಟ್-ಚೆಕ್ ಲೇಖನದಲ್ಲಿ, ಈ ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳವು ಭಾಂಗಾ ಉಪಜಿಲ್ಲೆಯಲ್ಲಿರುವ ಮನ್ಸೂರಬಾದ್ ಹೈಸ್ಕೂಲ್ ಎದುರಿಗಿರುವ ಢಾಕಾ-ಖುಲ್ನಾ ಹೆದ್ದಾರಿ ಎಂದು ಉಲ್ಲೇಖಿಸಲಾಗಿದೆ.

ನಾವು ಈ ಸ್ಥಳವನ್ನು  ಗೂಗಲ್ ಮ್ಯಾಪ್ ನಲ್ಲಿ ನೋಡಿದಾಗ, ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ್ದು ಅಲ್ಲೇ ಎಂದು ನಮಗೆ ಸ್ಪಷ್ಟವಾಯಿತು.

ಕೊನೆಯದಾಗಿ  ಹೇಳುವುದಾದರೆ, ಕೇಂದ್ರ ಚುನಾವಣಾ ಆಯೋಗವು ಅಕ್ರಮವಾಗಿ ಪಡೆದ ಮತದಾರರ ಚೀಟಿಗಳನ್ನು ತೆಗೆದು ಹಾಕುವುದಾಗಿ ಘೋಷಿಸಿದ ಕೂಡಲೇ, ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು  ಬಾಂಗ್ಲಾದೇಶದಲ್ಲಿ ಚಿತ್ರೀಕರಿಸಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.