ಸೆಪ್ಟೆಂಬರ್ 2022 ರ ಪ್ರತಿಭಟನಾ ವೀಡಿಯೊವನ್ನು ಕಡ್ಡಾಯ ಹಿಜಾಬ್ ನಿಯಮ ಕೊನೆಗೊಂಡಿದ್ದನ್ನು ಇರಾನಿಯನ್ನರು ಸಂಭ್ರಮಿಸುತ್ತಿದ್ದಾರೆ ಎಂಬ ಸುಳ್ಳು ಕ್ಲೈಮನ್ನು ಹಂಚಿಕೊಳ್ಳಲಾಗುತ್ತಿದೆ

 ಮಹಿಳೆಯರು ಬೆಂಕಿಯ ಸುತ್ತಲೂ ಕುಣಿಯುತ್ತಾ, ಜನಸಮೂಹದ ಹರ್ಷೋದ್ಗಾರದ ನಡುವೆ ತಮ್ಮ ಸ್ಕಾರ್ಫ್‌ಗಳನ್ನು ಸುಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಇರಾನ್ ಹಿಜಾಬ್ ಧರಿಸುವ ಕಾನೂನು ಕಡ್ಡಾಯವನ್ನು ತೆಗೆದುಹಾಕಿದ್ದು, ಅದನ್ನು ವೈಯಕ್ತಿಕ ಆಯ್ಕೆಯ ವಿಷಯವನ್ನಾಗಿ ಮಾಡಿದೆ ಎಂಬ ಕ್ಲೇಮ್ನೊಂದಿಗೆ  ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬದಲಾವಣೆಯನ್ನು ಆಚರಿಸಲು ದೇಶದಾದ್ಯಂತ ಜನರು ಬೀದಿಗಿಳಿದು ಸಾಮೂಹಿಕವಾಗಿ ಹಿಜಾಬ್‌ಗಳನ್ನು ಸುಡುತ್ತಿದ್ದಾರೆ ಎಂದೂ  ತಿಳಿಸಲಾಗಿದೆ. ಈ ಲೇಖನದಲ್ಲಿ ಪೋಸ್ಟ್‌ನಲ್ಲಿ ಮಾಡಲಾದ  ಕ್ಲೇಮ್‌ನ್ನು ಪರಿಶೀಲಿಸೋಣ.

ಕ್ಲೇಮ್: ಕಡ್ಡಾಯ ಹಿಜಾಬ್ ಧರಿಸುವ ಕಾನೂನು ಅಂತ್ಯಗೊಂಡಿದ್ದನ್ನು ಇರಾನಿಯನ್ನರು ಸಾಮೂಹಿಕವಾಗಿ ಹಿಜಾಬ್‌ಗಳನ್ನು ಬೀದಿಗಳಲ್ಲಿ ಸುಡುವ ಮೂಲಕ ಸಂಭ್ರಮಿಸುತ್ತಿರುವ ದೃಶ್ಯವನ್ನು ಈ ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ಈ ವಿಡಿಯೋ ಸೆಪ್ಟೆಂಬರ್ 2022 ರ ಹಿಂದಿನದಾಗಿದ್ದು, ಇರಾನಿಯನ್ನರು ಕಡ್ಡಾಯ ಹಿಜಾಬ್ ಕಾನೂನು ಅಂತ್ಯಗೊಂಡಿದ್ದನ್ನು ಸಂಭ್ರಮಿಸುತ್ತಿರುವುದನ್ನು ಇದು ತೋರಿಸುವುದಿಲ್ಲ. ದೇಶದ ಉಡುಗೆ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ನೀತಿ ಪೊಲೀಸ್‌ನಿಂದ ಬಂಧಿತರಾಗಿದ್ದ 22 ವರ್ಷದ ಮಹ್ಸಾ ಅಮಿನಿಯವರ ಸಾವಿನ ನಂತರ ಭುಗಿಲೆದ್ದ ದೇಶವ್ಯಾಪಿ ಪ್ರತಿಭಟನೆಗಳ ಸಮಯದಲ್ಲಿ ಇದನ್ನು ಇರಾನ್‌ನ ಸಾರಿ ನಗರದಲ್ಲಿ ಚಿತ್ರೀಕರಿಸಲಾಗಿದೆ. ಮಹಿಳೆಯರು ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಟ್ಟಿದ್ದು, ಇದು ಅವಕಾಶಕ್ಕೆ ನೀಡಿದ ಪ್ರತಿರೋಧದ ರೂಪವಾಗಿತ್ತು. ಅಕ್ಟೋಬರ್ 2025 ರ ಹೊತ್ತಿಗೆ, ಇರಾನ್ ಹಿಜಾಬ್ ಧರಿಸುವ ಕಾನೂನು ಕಡ್ಡಾಯವನ್ನು ತೆಗೆದುಹಾಕಿದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆ ಅಥವಾ ಅಧಿಕೃತ ಪ್ರಕಟಣೆ ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ  ಕ್ಲೇಮ್ ಸುಳ್ಳು.

ವೈರಲ್ ವೀಡಿಯೊದ ಪ್ರಮುಖ ಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು, ಅದೇ ದೃಶ್ಯಗಳನ್ನು ಒಳಗೊಂಡಿರುವ ವಾಯ್ಸ್ ಆಫ್ ಅಮೇರಿಕಾದ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಪ್ಟೆಂಬರ್ 22, 2022 ರಂದು ಅಪ್‌ಲೋಡ್ ಮಾಡಿದ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯ ಪ್ರಕಾರ, ಈ ಕ್ಲಿಪ್ ಇರಾನ್‌ನ ಸಾರಿ ನಗರದ್ದಾಗಿದ್ದು, ‘ಅನುಚಿತ ಉಡುಪು’ ಧರಿಸಿದ್ದಾರೆ ಎಂಬ ಆರೋಪದ ಮೇಲೆ ನೀತಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ 22 ವರ್ಷದ ಮಹ್ಸಾ ಅಮಿನಿಯವರ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆಗಳ ಸಮಯದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಪ್ರತಿಭಟನೆಗಳು ಶೀಘ್ರದಲ್ಲೇ ಉಲ್ಬಣಗೊಂಡು, ಪೊಲೀಸ್ ಠಾಣೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ವರದಿಗಳೂ ಬಂದವು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್, ‘ಇಂತಹ ಚಟುವಟಿಕೆಗಳು ಸಮಾಜದ ಮಾನಸಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಬಹುದು’ ಎಂದು ಹೇಳುತ್ತಾ, ಸಾಮಾಜಿಕ ಮಾಧ್ಯಮದಲ್ಲಿ ‘ಸುಳ್ಳು ಸುದ್ದಿ ಮತ್ತು ವದಂತಿಗಳನ್ನು’ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಂಗಕ್ಕೆ ಒತ್ತಾಯಿಸಿತು.

2022 ರಲ್ಲಿ ಈ ಅಶಾಂತಿಯನ್ನು ವರದಿ ಮಾಡಿದ ಇತರ ಹಲವು ಮಾಧ್ಯಮ ವರದಿಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ, ಇದು ಹಲವಾರು ಇರಾನಿನ ನಗರಗಳಿಗೆ ವೇಗವಾಗಿ  ಹರಡಿದೆ. ಕಡ್ಡಾಯ ಉಡುಗೆ ಸಂಹಿತೆಯನ್ನು ವಿರೋಧಿಸಿ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ಗಳನ್ನು ತೆಗೆದುಹಾಕುವುದು ಮತ್ತು ಸುಡುವುದು ಕಂಡುಬಂದಿತು, ಅದೇ ಸಮಯದಲ್ಲಿ ಪ್ರದರ್ಶಕರು ಸರ್ಕಾರದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಪ್ರತಿಭಟನೆಗಳು ಶೀಘ್ರದಲ್ಲೇ ಸರ್ಕಾರಿ ನೀತಿಗಳನ್ನು ಪ್ರಶ್ನಿಸುವ ದೊಡ್ಡ ಪ್ರಮಾಣದ ಚಳುವಳಿಯಾಗಿ ಬೆಳೆದು, ದೊಡ್ಡ  ಭದ್ರತಾ ನಿರ್ಬಂಧಕ್ಕೆ ಕಾರಣವಾಯಿತು. ನಂತರ, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಹಕ್ಕುಗಳ ಗುಂಪುಗಳು ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲವನ್ನು ಬಳಸಿದ ಬಗ್ಗೆ ಇರಾನಿನ ಪಡೆಗಳ ಮೇಲೆ ಆರೋಪ ಹೊರಿಸಿದವು.

ಇದಲ್ಲದೆ, ಅಕ್ಟೋಬರ್ 2025 ರ ಹೊತ್ತಿಗೆ, ಇರಾನ್ ಹಿಜಾಬ್ ಧರಿಸುವ ಕಾನೂನು ಕಡ್ಡಾಯವನ್ನು ರದ್ದುಗೊಳಿಸಿದೆ ಅಥವಾ ಅದನ್ನು ವೈಯಕ್ತಿಕ ಆಯ್ಕೆಯ ವಿಷಯವನ್ನಾಗಿ ಮಾಡಿದೆ ಎಂಬುದನ್ನು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಮಾಹಿತಿಯನ್ನು ನಾವು ಕಂಡುಕೊಂಡಿಲ್ಲ. ಎಎಫ್‌ಪಿ (AFP) ವರದಿಯ ಪ್ರಕಾರ, ಇರಾನ್‌ನಲ್ಲಿರುವ ಮಾನವ ಹಕ್ಕುಗಳ ಕೇಂದ್ರದ  ಪ್ರತಿಪಾದನಾ ನಿರ್ದೇಶಕಿಯಾದ ಬಹಾರ್ ಘಂಡೇಹರಿ, ‘ಇರಾನಿನ ದಂಡ ಸಂಹಿತೆಯು ಇನ್ನೂ ಮಹಿಳೆಯರು ಹಿಜಾಬ್ ಅನ್ನು ಪಾಲಿಸುವಂತೆ ಒತ್ತಾಯಿಸುತ್ತದೆ ಎಂದು ದೃಢಪಡಿಸಿದ್ದಾರೆ. ಅಕ್ಟೋಬರ್ 11, 2025 ರ ಇಮೇಲ್‌ನಲ್ಲಿ ಅವರು ಎಎಫ್‌ಪಿಗೆ, ‘ಕಡ್ಡಾಯ ಹಿಜಾಬ್ ಅಗತ್ಯವನ್ನು ಕಾನೂನುಬದ್ಧವಾಗಿ ರದ್ದುಗೊಳಿಸಲಾಗಿಲ್ಲ. ಇದು ಇನ್ನೂ ದೇಶದ ಕಾನೂನಾಗಿ ಉಳಿದಿದೆ. ಜಾರಿಯ ಮಟ್ಟದಲ್ಲಿ ಮಾತ್ರ ಬದಲಾವಣೆಯಾಗಿದೆ, ಆದರೆ ಇದು ಸಹ ಸ್ಥಿರವಾಗಿಲ್ಲ ಮತ್ತು ಇರಾನ್‌ನ ನಗರ ಹಾಗೂ ಪ್ರಾಂತ್ಯಗಳನ್ನು ಅವಲಂಬಿಸಿ ಬದಲಾಗುತ್ತದೆ‘ ಎಂದು ತಿಳಿಸಿದರು.

ಮೇ 2025 ರ ವರದಿಗಳ ಪ್ರಕಾರ, ಇರಾನ್‌ನಲ್ಲಿ ಕೆಲವು ಮಹಿಳೆಯರು ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಆದರೂ ಬಿಗಿ ಕ್ರಮಗಳು ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇತರ ವರದಿಗಳು, ಬೀದಿಗಳಲ್ಲಿನ ಮುಖಾಮುಖಿಗಳನ್ನು ತಪ್ಪಿಸಲು ಅಧಿಕಾರಿಗಳು ಹೆಚ್ಚಾಗಿ ಕಣ್ಗಾವಲು, ದಂಡಗಳು ಮತ್ತು ಮುಸುಕು ಧರಿಸದ ಮಹಿಳೆಯರಿಗೆ ಸೇವೆ ಸಲ್ಲಿಸುವ ವ್ಯಾಪಾರಗಳನ್ನು ಮುಚ್ಚುವಂತಹ ಕ್ರಮಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳಿವೆ.

ಈ ವದಂತಿಯು, ಇರಾನ್‌ನ ನಾಯಕನಿಗೆ ಸಲಹೆ ನೀಡುವ ಮತ್ತು ಶಾಸಕಾಂಗ ವಿವಾದಗಳನ್ನು ಪರಿಹರಿಸುವ ಸಲಹಾ ಸಂಸ್ಥೆಯಾದ ಎಕ್ಸ್‌ಪೀಡಿಯನ್ಸಿ ಡಿಸರ್ನ್‌ಮೆಂಟ್ ಕೌನ್ಸಿಲ್‌ನ ಸದಸ್ಯರಾದ ಮೊಹಮ್ಮದ್-ರೆಜಾ ಬಹೋನರ್ ಅವರನ್ನು ಉಲ್ಲೇಖಿಸಿದ ಅಕ್ಟೋಬರ್ 2025 ರ ವರದಿಯಿಂದ  ಬಂದಿರುವಂತೆ ತೋರುತ್ತದೆ. ಅವರು ‘ಪ್ರಸ್ತುತ, ಹಿಜಾಬ್‌ಗೆ ಸಂಬಂಧಿಸಿದಂತೆ ಯಾವುದೇ ಕಡ್ಡಾಯ ಕಾನೂನು ಇಲ್ಲ’ ಎಂದು ಹೇಳಿಕೆ ನೀಡಿದ್ದರು. ಆದರೆ, ತದನಂತರದ ಸಂದರ್ಶನವೊಂದರಲ್ಲಿ ಈ ಹೇಳಿಕೆಯನ್ನು ಹಿಂತೆಗೆದುಕೊಂಡು, ಹಿಜಾಬ್ ಧರಿಸುವುದನ್ನು ಇನ್ನೂ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.

​ ಕೊನೆಯದಾಗಿ ಹೇಳುವುದಾದರೆ, ಸೆಪ್ಟೆಂಬರ್ 2022 ರ ಪ್ರತಿಭಟನಾ ವೀಡಿಯೊವನ್ನು, ಇರಾನಿಯನ್ನರು ಹಿಜಾಬ್ ಧರಿಸುವ ಕಾನೂನು ಕಡ್ಡಾಯ ಅಂತ್ಯಗೊಂಡಿದ್ದನ್ನು ಸಂಭ್ರಮಿಸುತ್ತಿದ್ದಾರೆ ಎಂಬ ಸುಳ್ಳು  ಕ್ಲೈಮ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ.