ಫೆಬ್ರವರಿ 2025 ರ ಆರು ಹೊಸ ಸಿಂಧೂ ಕಾಲುವೆಗಳ ನಿರ್ಮಾಣದ ವಿರುದ್ಧದ ಪ್ರತಿಭಟನಾ ವೀಡಿಯೊವನ್ನು ಸಿಂಧುದೇಶಕ್ಕೆ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸುವ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

2025 ಮೇ 09 ರಂದು, ಸ್ವಯಂ ಘೋಷಿತ ಬಲೂಚ್ ಪ್ರತ್ಯೇಕತಾವಾದಿ ವಕ್ತಾರ, ಬರಹಗಾರ, ಪತ್ರಕರ್ತ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಮೀರ್ ಯಾರ್ ಬಲೂಚ್, ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾದ ಬಲೂಚಿಸ್ತಾನ್ ದೇಶದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗುತ್ತಿದೆ ಎಂದು X (ಹಿಂದೆ ಟ್ವಿಟರ್) ನಲ್ಲಿ ಹೇಳಿಕೊಂಡಿದ್ದರು. ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸುವಂತೆ ಅವರು ವಿಶ್ವಸಂಸ್ಥೆ, ಭಾರತ ಮತ್ತು ಇತರ ದೇಶಗಳಿಗೆ ಮನವಿ ಮಾಡಿದರು. ಬಲೂಚಿಸ್ತಾನದಲ್ಲಿರುವ ಪ್ರಸ್ತುತ ಪಾಕಿಸ್ತಾನಿ ಸರ್ಕಾರ ಕುಸಿಯುತ್ತಿದ್ದು, ಇದನ್ನು ಸ್ವತಂತ್ರ ಸರ್ಕಾರದಿಂದ ಬದಲಾಯಿಸಲ್ಪಡುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಭಾರತ ಅಥವಾ ವಿಶ್ವಸಂಸ್ಥೆ ಬಲೂಚಿಸ್ತಾನ್ ಅನ್ನು ಸ್ವತಂತ್ರ ದೇಶವೆಂದು ಗುರುತಿಸುವ ಯಾವುದೇ ಅಫೀಷಿಯಲ್ ಹೇಳಿಕೆಯನ್ನು ನೀಡಿಲ್ಲ.

ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ (ಇಲ್ಲಿ)  ಪಾಕಿಸ್ತಾನದಲ್ಲಿ ಜನರ ದಂಗೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಬಲೂಚಿಸ್ತಾನದ ನಂತರ, ಸಿಂಧುದೇಶದ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ತೀವ್ರಗೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಸಿಂಧುದೇಶದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದಲ್ಲಿ ನಡೆದ ಬೃಹತ್ ಪ್ರತಿಭಟನೆಗಳನ್ನು ಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ಸಿಂಧ್‌ನಲ್ಲಿ ಸಿಂಧೂ ನದಿಗೆ ಆರು ಹೊಸ ಕಾಲುವೆಗಳ ನಿರ್ಮಾಣದ ವಿರುದ್ಧ ಫೆಬ್ರವರಿ 2025 ರ ಪ್ರತಿಭಟನೆಯನ್ನು ತೋರಿಸುತ್ತದೆ. ಸಿಂಧೂದೇಶದ ಸ್ವಾತಂತ್ರ್ಯವನ್ನು ಒತ್ತಾಯಿಸುವ ಯಾವುದೇ ಪ್ರತಿಭಟನೆಯನ್ನು ಇದು ತೋರಿಸುವುದಿಲ್ಲ. ಈ ಪ್ರತಿಭಟನೆಯು ಜಲಸಂಪನ್ಮೂಲ ಕಾಳಜಿಯ ಕುರಿತಾಗಿದ್ದು, ಬಲೂಚಿಸ್ತಾನದ ಮೇ 2025 ರ ಘೋಷಣೆಗಿಂತ ಹಿಂದಿನದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಫೆಬ್ರವರಿ 23, 2025 ರ ಹಲವಾರುಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಅದೇ ದೃಶ್ಯಗಳನ್ನು ತೋರಿಸುತ್ತವೆ (ಇಲ್ಲಿ, ಇಲ್ಲಿ).  “ಪಾಕಿಸ್ತಾನ ತನ್ನ ಗುರುತನ್ನು ಕಳೆದುಕೊಳ್ಳುತ್ತಿದೆ! ಸಿಂಧೂ ನದಿಯಿಂದ ಕಾಲುವೆಗಳನ್ನು ನಿರ್ಮಿಸುವುದನ್ನು ನಿಲ್ಲಿಸಿ ಮತ್ತು ನದಿಯನ್ನು ಮುಕ್ತವಾಗಿ ಹರಿಯಲು ಬಿಡಿ. ಇದು ಕೇವಲ JSQM-A (ಜೆಯ್ ಸಿಂಧ್ ಕೌಮಿ ಮಹಾಜ್, ರಾಜಕೀಯ ಪಕ್ಷ) ಬೇಡಿಕೆಯಲ್ಲ, ಇದು ಇಡೀ ಸಿಂಧಿ ರಾಷ್ಟ್ರದ ಬೇಡಿಕೆಯಾಗಿದೆ!”  ಎಂದು ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಇದು ಮೇ 2025 ರ ಘಟನೆಗಳ ನಂತರ ಪ್ರತಿಭಟನೆ ನಡೆದಿಲ್ಲ ಎಂದು ದೃಢಪಡಿಸುತ್ತದೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ  ಆಧಾರದ ಮೇಲೆ, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿದ್ದೇವೆ. ಇದು  ಫೆಬ್ರವರಿ 23, 2025 ರಂದು ಪ್ರತಿಭಟನೆ ನಡೆದಿರುವುದನ್ನು ದೃಢೀಕರಿಸುವ ಹಲವಾರು ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ಕಂಡು ಬಂದಿದೆ. ವೈರಲ್ ವೀಡಿಯೊದಲ್ಲಿ ತೋರಿಸಿರುವ ಕಟ್ಟಡವು ಈ ಮಾಧ್ಯಮ ವರದಿಗಳಲ್ಲಿ ಕಾಣಿಸಿಕೊಂಡ ಕಟ್ಟಡವನ್ನು ಹೋಲುತ್ತದೆ. ವರದಿಗಳ ಪ್ರಕಾರ, ಸಿಂಧ್ ಕಾಲುವೆ ಯೋಜನೆಗಳ ವಿರುದ್ಧದ ಪ್ರತಿಭಟನೆಗಳ ನಡುವೆ ಸಿಂಧ್‌ನಲ್ಲಿ ಹೆದ್ದಾರಿಗಳನ್ನು ನಿರ್ಬಂಧಿಸಲಾಗಿದೆ. ಪ್ರಾಂತ್ಯದ ಜಲಸಂಪನ್ಮೂಲಗಳಿಗೆ ಬೆದರಿಕೆ ಇದೆ ಎಂದು ಉಲ್ಲೇಖಿಸಿ ಸಿಂಧ್‌ನಾದ್ಯಂತ ರಾಷ್ಟ್ರೀಯತಾವಾದಿ ಪಕ್ಷಗಳು ಸಿಂಧ್ ನದಿಯಲ್ಲಿ ಆರು ಹೊಸ ಕಾಲುವೆಗಳ ನಿರ್ಮಾಣವನ್ನು ವಿರೋಧಿಸಿದವು. ಕಾಣೆಯಾದ ವಕೀಲ ಅಮೀರ್ ಅಲಿ ಉಮ್ರಾನಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶಹೀದ್ ಬೆನಜೀರಾಬಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಜೆಯ್ ಸಿಂಧ್ ಮಹಾಜ್ ಜೆಯ್ ಸಿಂಧ್ ಕ್ವಾಮಿ ಮಹಾಜ್ ನಾಯಕಿ ಸನ್ನಾ ಖುರೇಷಿ ಡೇರಾ ಮೌರ್‌ನಲ್ಲಿ ಪ್ರತಿಭಟನೆ ನಡೆಸಿದರು. ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ಎಚ್ಚರಿಸಿದರು. ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳು ಸಿಂಧ್‌ನ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿವೆ ಮತ್ತು ಅಲ್ಲಿನ ನಾಗರಿಕರನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾಲುವೆ ಯೋಜನೆಯು ಸಿಂಧ್ ಅನ್ನು ಬಂಜರು ಭೂಮಿಯಾಗಿ ಪರಿವರ್ತಿಸಬಹುದು ಎಂದು ಎಚ್ಚರಿಸಿದರು.

ವೈರಲ್ ವೀಡಿಯೊದಲ್ಲಿ “ರಿಲೀಸ್ ಅಡ್ವಕೇಟ್ ಆಮಿರ್ ಉಮ್ರಾನಿ” ಎಂದು ಬರೆದಿರುವ ಬ್ಯಾನರ್ ಇರುವುದನ್ನು ನಾವು ಗಮನಿಸಿದ್ದೇವೆ. ಇದರೊಂದಿಗೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನರು ಸ್ವತಂತ್ರ ಸಿಂಧ್‌ಗಾಗಿ ಪ್ರತಿಭಟಿಸುತ್ತಿರುವುದನ್ನು ವೀಡಿಯೊದಲ್ಲಿ ಚಿತ್ರಿಸಲಾಗಿಲ್ಲ ಎಂದು ನಾವು ಖಚಿತಪಡಿಸಬಹುದು.

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಹಿಂದಿನ ಪ್ರತಿಭಟನೆಗಳು ‘ಸಿಂಧುದೇಶ’ದ ಸ್ವಾತಂತ್ರ್ಯಕ್ಕಾಗಿ ಬೇಡಿಕೆಗಳನ್ನು (ಇಲ್ಲಿ, ಇಲ್ಲಿ) ಒಳಗೊಂಡಿದ್ದರೂ, ಈ ವೀಡಿಯೊ ಆ ಪ್ರತಿಭಟನೆಗಳನ್ನು ತೋರಿಸುತ್ತಿಲ್ಲ. ಬದಲಾಗಿ, ಸಿಂಧ್‌ನಲ್ಲಿ ಸಿಂಧು ನದಿಗೆ ಆರು ಹೊಸ ಕಾಲುವೆಗಳ ನಿರ್ಮಾಣದ ವಿರುದ್ಧದ ಪ್ರದರ್ಶನವನ್ನು ತೋರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆರು ಹೊಸ ಸಿಂಧು ಕಾಲುವೆಗಳ ನಿರ್ಮಾಣದ ವಿರುದ್ಧದ ಫೆಬ್ರವರಿ 2025 ರ ಪ್ರತಿಭಟನಾ ವೀಡಿಯೊವನ್ನು ಸಿಂಧುದೇಶಕ್ಕೆ ಸ್ವಾತಂತ್ರ್ಯವನ್ನು ಕೋರುವ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.