ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆಯಲು ಬಳಸಿದ ಬ್ಯಾಟ್ ಅನ್ನು ಲಲಿತ್ ಮೋದಿ ₹7 ಕೋಟಿಗೆ ಹರಾಜು ಹಾಕಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ

2007 ಕ್ರಿಕೆಟ್ ವಿಶ್ವಕಪ್‌ಗಿಂತ ಮೊದಲು, ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದವರಿಗೆ ಪೋರ್ಷೆ ಕಾರನ್ನು ನೀಡುವುದಾಗಿ ಲಲಿತ್ ಮೋದಿ ಆಟಗಾರರಿಗೆ ಭರವಸೆ ನೀಡಿದ್ದ, ನಂತರ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸ್‌ಗಳನ್ನು ಹೊಡೆದ ನಂತರ ಲಲಿತ್ ಮೋದಿ ಅವರಿಗೆ 91 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈಗ ಅವರು ಆ ಬ್ಯಾಟನ್ನು 7 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮನ್ನು ಪರಿಶೀಲಿಸೋಣ. 

ಕ್ಲೇಮ್: 2007ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದಿದ್ದಕ್ಕಾಗಿ ಯುವರಾಜ್ ಸಿಂಗ್‌ಗೆ ಲಲಿತ್ ಮೋದಿ 91 ಲಕ್ಷ ರೂಪಾಯಿ ಮೌಲ್ಯದ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದರು ಮತ್ತು ಆ ಬ್ಯಾಟನ್ನು 7 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ.

ಫ್ಯಾಕ್ಟ್ : ಸುದ್ದಿ ವರದಿಗಳ ಪ್ರಕಾರ, ಲಲಿತ್ ಮೋದಿ ಯುವರಾಜ್ ಸಿಂಗ್‌ಗೆ ಪೋರ್ಷೆ ಕಾರನ್ನು ನೀಡಿದ್ದು ನಿಜ. ಆದರೆ ಯುವರಾಜ್ ಸಿಂಗ್ ಅವರ ಬ್ಯಾಟನ್ನು ಲಲಿತ್ ಮೋದಿ 7 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಲಭ್ಯವಿಲ್ಲ. ಆ ಬ್ಯಾಟ್ ತಮ್ಮ ಮನೆಯಲ್ಲೇ ಇದೆ ಎಂದು ಲಲಿತ್ ಮೋದಿ ಅವರು ರಾಜ್ ಶಮಾನಿ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟುವರ್ಟ್ ಕ್ಲಾರ್ಕ್ ಅವರ ಪಾಡ್‌ಕಾಸ್ಟ್‌ಗಳಲ್ಲಿ ತಿಳಿಸಿದ್ದಾರೆ. ರಾಜ್ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಮೋದಿ ಆ ಬ್ಯಾಟನ್ನು ತೋರಿಸಿದ್ದಾರೆ ಕೂಡ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಕ್ಲೇಮ್ ದಾರಿ ತಪ್ಪಿಸುವಂತಿದೆ.

​ಈ ಕ್ಲೇಮ್ ಹಿನ್ನೆಲೆಯಲ್ಲಿರುವ ನಿಜಾಂಶವನ್ನು ತಿಳಿದುಕೊಳ್ಳಲು, ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಯುವರಾಜ್ ಸಿಂಗ್ 2007ರ ಟಿ-20 ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸ್‌ಗಳನ್ನು ಹೊಡೆದ ಬ್ಯಾಟನ್ನು ಲಲಿತ್ ಮೋದಿ 7 ಕೋಟಿ ರೂಪಾಯಿಗಳಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ನಮಗೆ ಲಭ್ಯವಾಗಿಲ್ಲ. ಹಾಗೆಯೇ, ಇಲ್ಲಿಯವರೆಗೆ ಹರಾಜಿನಲ್ಲಿ ಮಾರಾಟವಾದ (ಇಲ್ಲಿ, ಇಲ್ಲಿ) ಕ್ರಿಕೆಟ್ ಆಟಗಾರರ ಬ್ಯಾಟ್ ಆಗಲಿ ಅಥವಾ ಬೇರೆ ಯಾವುದೇ ವಸ್ತುವಾಗಲಿ 7 ಕೋಟಿ ರೂಪಾಯಿಗಳಿಗೆ ಮಾರಾಟವಾಗಿರುವ ಬಗ್ಗೆ ನಮಗೆ ಯಾವುದೇ ವರದಿಗಳು ಸಿಕ್ಕಿಲ್ಲ. ಜಾಗರಣ್ ಜೋಶ್ ಅವರ ಆಗಸ್ಟ್ 2025ರ ಒಂದು ವರದಿಯ ಪ್ರಕಾರ, ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವಾರ್ನ್ ಅವರ ‘ಬ್ಯಾಗಿ ಗ್ರೀನ್ ಕ್ಯಾಪ್’ 5.79 ಕೋಟಿ ರೂಪಾಯಿಗಳಿಗೆ (ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ಹರಾಜಿನಲ್ಲಿ ಮಾರಾಟವಾಗಿದೆ. ಒಂದು ವೇಳೆ ಯುವರಾಜ್ ಅವರ ಬ್ಯಾಟ್ 7 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿದ್ದರೆ, ಆ ವಿಷಯವನ್ನು ಮಾಧ್ಯಮಗಳು ಖಂಡಿತವಾಗಿಯೂ ವರದಿ ಮಾಡುತ್ತಿದ್ದವು. ಇದರ ಆಧಾರದ ಮೇಲೆ ಈ ಪೋಸ್ಟ್‌ನಲ್ಲಿರುವ ಫ್ಯಾಕ್ಟ್ ಸರಿಯಾಗಿಲ್ಲ ಎಂದು ತಿಳಿದುಬರುತ್ತದೆ.

ಇನ್ನು ಈ ವಿಷಯದ ಬಗ್ಗೆ ಲಲಿತ್ ಮೋದಿ ಏನೆಂದು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು, ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಅವರು ಈ ವಿಷಯದ ಬಗ್ಗೆ ‘Raj Shamani’ ಪಾಡ್‌ಕಾಸ್ಟ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟುವರ್ಟ್ ಕ್ಲಾರ್ಕ್ ಅವರ ಪಾಡ್‌ಕಾಸ್ಟ್‌ಗಳಲ್ಲಿ ಮಾತನಾಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ (ಇಲ್ಲಿ, ಇಲ್ಲಿ, ಇಲ್ಲಿ). ಹಾಗೆಯೇ, ಯುವರಾಜ್ ಸಿಂಗ್ ಆರು ಸಿಕ್ಸರ್‌ಗಳನ್ನು ಹೊಡೆದ ನಂತರ, ಲಲಿತ್ ಮೋದಿ ಅವರಿಗೆ ಪೋರ್ಷೆ ಕಾರನ್ನು ನೀಡಿ ಅವರ ಬ್ಯಾಟನ್ನು ಪಡೆದುಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ಆಗಸ್ಟ್ 2025ರ ಲೇಖನದಲ್ಲಿ ಉಲ್ಲೇಖಿಸಿದೆ.

2007ರ ಟಿ-20 ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಯಾರಾದರೂ ಆಟಗಾರರು ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದರೆ ಅಥವಾ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದರೆ, ಅವರಿಗೆ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಾವು ಭಾರತೀಯ ಕ್ರಿಕೆಟ್ ತಂಡಕ್ಕೆ ಹೇಳಿದ್ದಾಗಿ ಲಲಿತ್ ಮೋದಿ ನವೆಂಬರ್ 2024ರ ‘Raj Shamani’ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.

ಆ ನಂತರ, ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದ ನಂತರ ತನ್ನ ಕಡೆಗೆ ಓಡಿ ಬಂದು, “ನನ್ನ ಪೋರ್ಷೆ ಎಲ್ಲಿದೆ?” ಎಂದು ಕೇಳಿದರಂತೆ. ಅದಕ್ಕೆ ಲಲಿತ್ ಮೋದಿ, “ನನಗೆ ಆ ಬ್ಯಾಟ್ ಕೊಡು” ಎಂದು ಉತ್ತರಿಸಿದರಂತೆ. ಆ ಬ್ಯಾಟ್ ಈಗಲೂ ತನ್ನ ಮನೆಯಲ್ಲೇ ಇದೆ ಎಂದು ಅವರು ಹೇಳಿದ್ದಾರೆ. ಆ ಬ್ಯಾಟ್‌ನೊಂದಿಗೆ ಲಲಿತ್ ಮೋದಿ ಮತ್ತು ರಾಜ್ ಶಮಾನಿ ಅವರು ಇರುವ ಫೋಟೋ ಈ ಪಾಡ್‌ಕಾಸ್ಟ್‌ನಲ್ಲಿದೆ, ಇದನ್ನು ನೀವು 51:28 ಟೈಮ್ ಮಾರ್ಕ್ ಹತ್ತಿರ ನೋಡಬಹುದು.

ಇದೇ ವಿಷಯವನ್ನು ಲಲಿತ್ ಮೋದಿ, ಆಗಸ್ಟ್ 2025ರ ಸ್ಟುವರ್ಟ್ ಕ್ಲಾರ್ಕ್ ಪಾಡ್‌ಕಾಸ್ಟ್‌ನಲ್ಲಿ ಕೂಡ ಹೇಳಿದ್ದಾರೆ. ಯುವರಾಜ್ ಆರು ಸಿಕ್ಸರ್‌ಗಳನ್ನು ಹೊಡೆದ ಬ್ಯಾಟ್ ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿದೆ ಎಂದು ಅವರು ಇದರಲ್ಲಿ ಉಲ್ಲೇಖಿಸಿದ್ದಾರೆ. ವೈರಲ್ ಪೋಸ್ಟ್‌ನಲ್ಲಿ ಹೇಳುತ್ತಿರುವಂತೆ, ತಾವು ಆ ಬ್ಯಾಟನ್ನು 7 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದೇವೆ ಎಂದು ಅವರು ಎಲ್ಲಿಯೂ ಹೇಳಿಲ್ಲ.

ಕೊನೆಯದಾಗಿ, 2007ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದಿದ್ದಕ್ಕಾಗಿ ಯುವರಾಜ್ ಸಿಂಗ್‌ಗೆ ಲಲಿತ್ ಮೋದಿ 91 ಲಕ್ಷ ರೂಪಾಯಿ ಮೌಲ್ಯದ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿ, ಆ ಬ್ಯಾಟನ್ನು 7 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ ಎಂಬ ಒಂದು ತಪ್ಪು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.