‘ಕೊರೊನಿಲ್ ಅನುಮೋದನೆಯನ್ನು ತಡೆದಿದ್ದಕ್ಕಾಗಿ ಡಾ. ಮುಜಾಹಿದ್ ಹುಸೇನ್ ಅವರನ್ನು ಆಯುಶ್ ಸಚಿವಾಲಯ ವಜಾಮಾಡಿದೆ’ ಎಂದು ನಕಲಿ ಸುದ್ದಿಯೊಂದು ಪ್ರತಿಪಾದಿಸಿದೆ

ಕೋವಿಡ್-19 ಚಿಕಿತ್ಸೆಗಾಗಿ ಪತಂಜಲಿ ಸಂಸ್ಥೆ ಪ್ರಸ್ತಾಪಿಸಿದ ‘ಕೊರೊನಿಲ್’ ಅನುಮೋದನೆಯನ್ನು ತಡೆದಿದ್ದಕ್ಕಾಗಿ ಡಾ.ಮುಜಾಹಿದ್ ಹುಸೇನ್ ಅವರನ್ನು ಆಯುಶ್ ಸಚಿವಾಲಯ ವಜಾಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆಯುಶ್ ಸಚಿವಾಲಯ ಇತ್ತೀಚೆಗೆ ಅಂತಹ ಯಾವುದೇ ಔಷಧಿಯನ್ನು ಅನುಮೋದಿಸಿಲ್ಲ ಮತ್ತು ಔಷಧಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುವಂತೆ ಸಂಸ್ಥೆಗೆ ಕೇಳಿದೆ ಎಂದು ಹೇಳಿಕೆ ನೀಡಿರುವ ಸಂದರ್ಭದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‍ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪತಂಜಲಿಯ ‘ಕೊರೊನಿಲ್’ ಅನುಮೋದನೆಯನ್ನು ತಡೆದಿದ್ದಕ್ಕೆ ಆಯುಶ್ ಸಚಿವಾಲಯ ತನ್ನ ಅಧಿಕಾರಿ ಡಾ.ಮುಜಾಹಿದ್ ಹುಸೇನ್ ಅವರನ್ನು ವಜಾಮಾಡಿದೆ.

ನಿಜಾಂಶ: ಇತ್ತೀಚಿನ ದಿನಗಳಲ್ಲಿ ಯಾವುದೇ ವೈದ್ಯರನ್ನು ಅಥವಾ ವೈದ್ಯಕೀಯ ಅಧಿಕಾರಿಯನ್ನು ಕರ್ತವ್ಯ ಅಥವಾ ಸೇವೆಯಿಂದ ತೆಗೆದುಹಾಕಿಲ್ಲ ಎಂದು ಆಯುಶ್ ಸಚಿವಾಲಯ ಸ್ಪಷ್ಟಪಡಿಸಿದೆ. ಪೋಸ್ಟ್ ನಕಲಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿದೆ. ಅಲ್ಲದೆ, ಆಯುಶ್ ವೆಬ್‍ಸೈಟ್‍ನಲ್ಲಿ ಆ ಹೆಸರಿನ ಯಾವುದೇ ಅಧಿಕಾರಿಯನ್ನು ಕಂಡುಹಿಡಿಯಲು ಫ್ಯಾಕ್ಟ್ಲಿಗೆ ಸಾಧ್ಯವಾಗಿಲ್ಲ. ಹಾಗಾಗಿ, ಪೋಸ್ಟ್‍ ನಲ್ಲಿ ಪ್ರತಿಪಾದಿಸಿರುವುದು ಸುಳ್ಳು.

ಪೋಸ್ಟ್ ನಲ್ಲಿ ನೀಡಲಾದ ಮಾಹಿತಿಗಾಗಿ ಹುಡುಕಿದಾಗ, ಆಯುಶ್ ಸಚಿವಾಲಯವು ಈಗಾಗಲೇ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ ಎಂದು ಕಂಡುಬಂದಿದೆ. ‘ಭಾರತ ಸರ್ಕಾರದ ಆಯುಶ್ ಸಚಿವಾಲಯ ಯಾವುದೇ ವೈದ್ಯರನ್ನು ಅಥವಾ ವೈದ್ಯಕೀಯ ಅಧಿಕಾರಿಯನ್ನು ಕರ್ತವ್ಯ ಅಥವಾ ಸೇವೆಯಿಂದ ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಯದಲ್ಲಿ ತೆಗೆದುಹಾಕಿಲ್ಲ’ ಎಂದು ಸಚಿವಾಲಯ ತನ್ನ ಅಧಿಕೃತ ಫೇಸ್‍ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಮಾಡಿದೆ. ತನ್ನ ಸ್ಪಷ್ಟೀಕರಣದಲ್ಲಿ ಅದೇ ಟ್ವೀಟ್‍ನ ಚಿತ್ರವನ್ನು ಕೂಡ ಪೋಸ್ಟ್ ಮಾಡಿದೆ. ಪೋಸ್ಟ್ ನಕಲಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಟ್ವೀಟ್ ಮಾಡಿದೆ. ಅಲ್ಲದೆ, ಸಚಿವಾಲಯದ ವೆಬ್‍ಸೈಟ್‍ನಲ್ಲಿ (‘ಮುಜಾಹಿದ್ ಹುಸೇನ್’) ಹೆಸರಿನ ಯಾವುದೇ ಅಧಿಕಾರಿಯನ್ನು ಫ್ಯಾಕ್ಟ್ಲಿಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

‘ಕೊರೊನಿಲ್’ ವಿವಾದದ ಇತ್ತೀಚಿನ ಸಮಾಚಾರದಲ್ಲಿ, ಆಚಾರ್ಯ ಬಾಲಕೃಷ್ಣ (ಪತಂಜಲಿ ಆಯುರ್ವೇದ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ) ಅವರು ಆಯುಶ್ ಸಚಿವಾಲಯದಿಂದ ಸ್ವೀಕರಿಸಿದ ಪತ್ರದ ಫೋಟೋವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಸಚಿವಾಲಯವು ಧೃಢೀಕರಣಕ್ಕಾಗಿ ಸಂಶೋಧನೆಗೆ ಸಂಬಂಧಿಸಿದ ದತ್ತಾಂಶ ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತದೆ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಯುಶ್ ಸಚಿವಾಲಯವು ‘ಕೊರೊನಿಲ್’ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯರನ್ನು ಅಥವಾ ವೈದ್ಯಕೀಯ ಅಧಿಕಾರಿಯನ್ನು ಕರ್ತವ್ಯ ಅಥವಾ ಸೇವೆಯಿಂದ ತೆಗೆದುಹಾಕಿಲ್ಲ.