ನಾರ್ವೆಯಲ್ಲಿ 2020 ರ ಭೂಕುಸಿತದಿಂದ ಮನೆಗಳು ಸಮುದ್ರಕ್ಕೆ ಕೊಚ್ಚಿ ಹೋಗುತ್ತಿರುವ ವೀಡಿಯೊವನ್ನು ಭಾರತದ ಜಮ್ಮುವಿನ ದೃಶ್ಯಗಳೆಂದು ತಪ್ಪಾಗಿ ಶೇರ್ ಮಾಡಲಾಗಿದೆ

ಆಗಸ್ಟ್ 2025 ರಲ್ಲಿ, ದಾಖಲೆಯ ಮಾನ್ಸೂನ್ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ.  ವೈಷ್ಣೋದೇವಿ ಯಾತ್ರಿಕರು ಸೇರಿದಂತೆ ಕನಿಷ್ಠ 34–41 ಜನರು ಇದರಿಂದಾಗಿ ಸಾವನ್ನಪ್ಪಿದ್ದು, ಶಾಲೆಗಳು, ರೈಲು ಸೇವೆಗಳನ್ನು ಸ್ಥಗಿತಗೊಂಡಿದೆ. ಇದರ ಜೊತೆಗೆ ಸೇತುವೆಗಳು ಕುಸಿದು ಹೆದ್ದಾರಿಗಳು ನಿರ್ಬಂಧಿಸಲ್ಪಟ್ಟವು, ಸಂವಹನ ಮತ್ತು ಮೂಲಸೌಕರ್ಯಗಳು ದುರ್ಬಲಗೊಂಡವು. ನದಿಗಳು ಉಕ್ಕಿ ಹರಿಯುತ್ತಿದ್ದಂತೆ ಅಧಿಕಾರಿಗಳು ದೊಡ್ಡ ಪ್ರಮಾಣದ ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಇದರಿಂದಾಗಿ  ಸಾವಿರಾರು ಜನರನ್ನು ಸ್ಥಳಾಂತರಗೊಳಿಸಲಾಗಿದೆ.  ಇದು ಪ್ರದೇಶದ ನೈಸರ್ಗಿಕ ವಿಕೋಪಗಳಿಗೆ ಹೆಚ್ಚುತ್ತಿರುವ ದುರ್ಬಲತೆಯನ್ನು ಬಹಿರಂಗಪಡಿಸಿತು (ಇಲ್ಲಿ, ಇಲ್ಲಿ, ಇಲ್ಲಿ).

ಇದರ ನಡುವೆ, ಭಾರತದ ಜಮ್ಮುವಿನಲ್ಲಿ ಭಾರೀ ಮಳೆಯ ನಂತರ ಭೂಕುಸಿತವು ಮನೆಗಳನ್ನು ನೀರಿನ ಮೂಲಕ್ಕೆ ಕೊಚ್ಚಿ ಹೋಗುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಹಂಚಿಕೊಳ್ಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ಜಮ್ಮುವಿನಲ್ಲಿ ಸಂಭವಿಸಿದ ಭೂಕುಸಿತವು ಭಾರೀ ಮಳೆಯ ನಂತರ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ಭಾರತದ ಜಮ್ಮುವಿನಲ್ಲಿ ಭೂಕುಸಿತವನ್ನು ತೋರಿಸುವುದಿಲ್ಲ. ಇದನ್ನು ವಾಸ್ತವವಾಗಿ ನಾರ್ವೆಯ ಆಲ್ಟಾ ನಗರಕ್ಕೆ ಸಂಬಂಧಿಸಿದಾಗಿದೆ. ಅಲ್ಲಿ ಜೂನ್ 03, 2020 ರಂದು, ಕ್ರಾಕ್ನೆಸೆಟ್ ಪ್ರದೇಶದಲ್ಲಿ ಸಂಭವಿಸಿದ ಬೃಹತ್ ಭೂಕುಸಿತವು ನಾರ್ವೇಜಿಯನ್ ಸಮುದ್ರದಲ್ಲಿ ಎಂಟು ಮನೆಗಳನ್ನು ಮುಳುಗಿಸಿತು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ಸುಳ್ಳು.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಜೂನ್ 05, 2020 ರ ಹಲವಾರು ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು, ಅದು ಅದೇ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಒಳಗೊಂಡಿದೆ. ಈ ವರದಿಗಳ ಪ್ರಕಾರ, ವೀಡಿಯೊ ನಾರ್ವೆಯಿಂದ ಬಂದಿದೆ ಎಂದು ತಿಳಿಸಿವೆ. 

ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಈ ಘಟನೆ ಜೂನ್ 03, 2020 ರಂದು ನಾರ್ವೆಯ ಆಲ್ಟಾ ನಗರದಲ್ಲಿ ನಡೆದಿದೆ. ಕ್ರಾಕ್ನೆಸೆಟ್ ಪ್ರದೇಶದಲ್ಲಿ, ನಾರ್ವೇಜಿಯನ್ ಸಮುದ್ರದಲ್ಲಿ ಭಾರಿ ಭೂಕುಸಿತ ಸಂಭವಿಸಿ ಎಂಟು ಮನೆಗಳು ಮುಳುಗಿದವು. ಪೊಲೀಸರನ್ನು ಉಲ್ಲೇಖಿಸಿ ವರದಿಗಳ ಪ್ರಕಾರ, ಅಪಘಾತದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ನೀರಿನಿಂದ ಕೊಚ್ಚಿ ಹೋದ ನಾಯಿಯನ್ನು ಸಹ ರಕ್ಷಿಸಲಾಯಿತು ಮತ್ತು ಮುನ್ನೆಚ್ಚರಿಕೆಯಾಗಿ ಹತ್ತಿರದ ಮನೆಗಳನ್ನು ಸ್ಥಳಾಂತರಿಸಲಾಯಿತು. ಈ ಕುರಿತು ಅಲ್ಲಿಯ ನಿವಾಸಿ ಜಾನ್ ಎಗಿಲ್ ಬಕ್ಕೆಡಾಲ್ ಅವರು ಭೂಕುಸಿತವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ ಕೊಚ್ಚಿಹೋದ ಮನೆಗಳಲ್ಲಿ ಅವರದ್ದು ಸೇರಿತ್ತು. ಕ್ರಾಕ್ನೆಸೆಟ್‌ನಲ್ಲಿ ಭೂಕುಸಿತವು 650 ರಿಂದ 800 ಮೀಟರ್ ಅಗಲ ಮತ್ತು 40 ಮೀಟರ್ ಎತ್ತರವಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.


ಒಟ್ಟಾರೆಯಾಗಿ ಹೇಳುವುದಾದರೆ, 2020 ರಲ್ಲಿ ನಾರ್ವೆಯಲ್ಲಿ ಭೂಕುಸಿತದಿಂದ ಮನೆಗಳು ಸಮುದ್ರಕ್ಕೆ ಕೊಚ್ಚಿ ಹೋಗಿದ್ದರ ವೀಡಿಯೊವನ್ನು ಭಾರತದ ಜಮ್ಮುವಿನ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.