2018 ರ ಚೀನಾದ ಥೀಮ್ ಪಾರ್ಕ್‌ನ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸುಡುತ್ತಿರುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ (ಶವಗಳನ್ನು ಬೆಂಕಿಯಲ್ಲಿ ಸುಡಲಾಗುತ್ತಿದೆ) ಎಂದು ತೋರಿಸುವ ಒಂದು ಭೀಕರ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಈ ಹೇಳಿಕೆಯನ್ನು ಪರಿಶೀಲಿಸೋಣ. 

ಕ್ಲೇಮ್: 2024 ರಲ್ಲಿ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂಗಳನ್ನು ಸುಟ್ಟುಹಾಕಿದ ಘಟನೆಯನ್ನು ವೈರಲ್ ವೀಡಿಯೋ ತೋರಿಸುತ್ತದೆ.

ಫ್ಯಾಕ್ಟ್: ಚೀನಾದ ‘ಚಿಮೆಲಾಂಗ್ ಓಷನ್ ಕಿಂಗ್‌ಡಮ್’ ಥೀಮ್ ಪಾರ್ಕ್‌ನಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಎರಡು ಮಾದರಿ ಮಾನವ ಶವಗಳನ್ನು ಸುಡುವುದನ್ನು ವೀಡಿಯೊ ತೋರಿಸುತ್ತದೆ. ಇದಕ್ಕೂ ಬಾಂಗ್ಲಾದೇಶಕ್ಕೂ ಯಾವುದೇ ಸಂಬಂಧವಿಲ್ಲ. ಇದಲ್ಲದೆ, ಬಾಂಗ್ಲಾದೇಶದಲ್ಲಿ ಅಂತಹ ಘಟನೆಯಾದ ಬಗ್ಗೆ ಯಾವುದೇ ವರದಿಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ಆಗಿರುವ ಕ್ಲೇಮ್ ನ  ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಈ ಕ್ಲೇಮ್ ಅನ್ನು ದೃಢೀಕರಿಸುವ ಯಾವುದೇ ವರದಿಗಳು ನಮಗೆ ಸಿಗಲಿಲ್ಲ.

ಇದಲ್ಲದೆ, ವೈರಲ್ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಮೂಲಕ ಅದು ನಮ್ಮನ್ನು 2018 ರ ಇನ್‌ಸ್ಟಾಗ್ರಾಮ್ ಪೋಸ್ಟ್ (ಆರ್ಕೈವ್ ಲಿಂಕ್) ಗೆ ಕರೆದೊಯ್ಯಿತು. ಅಲ್ಲಿ ಅದೇ ರೀತಿಯ ಮಾನವ ದೇಹಗಳನ್ನು ಸುಟ್ಟುಹಾಕುತ್ತಿರುವ ದೃಶ್ಯಗಳನ್ನು ಒಳಗೊಂಡಿದೆ. 

ಪೋಸ್ಟ್‌ನಲ್ಲಿ ಮಾಡಿದ ಸ್ಥಳ ಟ್ಯಾಗ್‌ನ ಪ್ರಕಾರ, ಇದು ಚೀನಾದ ಗುವಾಂಗ್‌ಡಾಂಗ್‌ನ ಹೆಂಗ್‌ಕಿನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ. ಅದೇ ದಿನ, ಈ ಇನ್‌ಸ್ಟಾಗ್ರಾಮ್ ಬಳಕೆದಾರರು ‘ಚಿಮೆಲಾಂಗ್ ಓಷನ್ ಕಿಂಗ್‌ಡಮ್’ ನಿಂದ ವೀಡಿಯೊಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಇಲ್ಲಿ ಹೆಂಗ್‌ಕಿನ್‌ನಲ್ಲಿರುವ ಎರಡು ದೇಹಗಳನ್ನು ಸುಡುವ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. 2018 ರಂದು ಹ್ಯಾಲೋವೀನ್ ಕಾರ್ಯಕ್ರಮದಲ್ಲಿ ಆ ವೀಡಿಯೊವನ್ನು ಸೆರೆಹಿಡಿಯಲಾಗಿದೆ ಎಂದು  ಇನ್‌ಸ್ಟಾಗ್ರಾಮ್ ಬಳಕೆದಾರರು ಉಲ್ಲೇಖಿಸಿದ್ದಾರೆ.

ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು ಕೀವರ್ಡ್ ಹುಡುಕಾಟ ನಡೆಸಿದಾಗ, ವೈರಲ್ ವೀಡಿಯೊದಲ್ಲಿ ಕಂಡುಬರುವ ಸೆಟಪ್ ಅನ್ನು ಒಳಗೊಂಡಿರುವ ಚಿಮೆಲಾಂಗ್ ಓಷನ್ ಕಿಂಗ್‌ಡಮ್‌ನಲ್ಲಿ ಚಿತ್ರೀಕರಿಸಲಾದ ವೀಡಿಯೊಗಳು (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಕಂಡುಬಂದವು. 2018 ರ  ಹ್ಯಾಲೋವೀನ್ ಪಾರ್ಟಿಯ ಸಮಯದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊಗಳಲ್ಲಿ, ಜನರು ವಿಭಿನ್ನ ಭಯಾನಕ ಬಟ್ಟೆಗಳನ್ನು ಧರಿಸಿರುವುದನ್ನು ನಾವು ನೋಡಬಹುದು. ವೈರಲ್ ವೀಡಿಯೊದಲ್ಲಿ ಕಂಡುಬರುವ ಮಾದರಿ ದೇಹಗಳೊಂದಿಗೆ (ಮ್ಯಾನೆಕ್ವಿನ್‌ಗಳು) ಅವರು ಆಟವಾಡುವುದನ್ನು ನಾವು ಕಾಣಬಹುದು.

ಇದಲ್ಲದೆ, ‘ಚಿಮೆಲಾಂಗ್ ಓಷನ್ ಕಿಂಗ್‌ಡಮ್’ ನ ಮಾಜಿ ಉದ್ಯೋಗಿಯೊಬ್ಬರು ಬರೆದ ಫೇಸ್‌ಬುಕ್ ಪೋಸ್ಟ್ ನಮಗೆ ಸಿಕ್ಕಿದೆ. ಅದರಲ್ಲಿ ಅಕ್ಟೋಬರ್ 2018 ರ ಈ ಹ್ಯಾಲೋವೀನ್ ಪಾರ್ಟಿಯ ಪೋಸ್ಟರ್‌ಗಳಿವೆ (ಇಲ್ಲಿ ಮತ್ತು ಇಲ್ಲಿ). ಈ ಪೋಸ್ಟ್‌ನಲ್ಲಿ ವೈರಲ್ ವೀಡಿಯೊದಲ್ಲಿ ಕಂಡುಬರುವ ಮರದ ಗೋಡೆಯಂತೆಯೇ ಇರುವ ಬ್ಯಾಕ್ಗ್ರೌಂಡ್  ಮತ್ತು ಸೆಟ್ಟಿಂಗ್‌ಗಳನ್ನು ಸಹ ಕಾಣಬಹುದು. ಈ ವೀಡಿಯೊವನ್ನು 2018 ರಲ್ಲಿ ಚೀನಾದಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಚಿತ್ರೀಕರಿಸಲಾಗಿದ್ದು, ಇದಕ್ಕೂ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸುಟ್ಟುಹಾಕಿದ ಇತ್ತೀಚಿನ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುವುದು ಸ್ಪಷ್ಟವಾಗಿದೆ. 

ಇನ್ನೂ ಹೇಳುವುದಾದರೆ, ಹೈಟಿಯಲ್ಲಿ ನರಭಕ್ಷಕತೆಯ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲು ಮತ್ತು ನೈಜೀರಿಯಾದ ರೆಸ್ಟೋರೆಂಟ್‌ಗಳು ಮಾನವ ದೇಹಗಳನ್ನು ಹುರಿಯುವ ದೃಶ್ಯಗಳಾಗಿಯೂ ಇದೇ ವೀಡಿಯೊವನ್ನು ಹಿಂದೆ ಬಳಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಪಂಚದಾದ್ಯಂತದ ಹಲವಾರು ಫ್ಯಾಕ್ಟ್- ಚೆಕಿಂಗ್ ಕ್ಲೇಮ್ ಗಳು ಇದನ್ನು ನಿರಾಕರಿಸಿದೆ. ನೀವು ಆ ಫ್ಯಾಕ್ಟ್ ಚೆಕ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ಹ್ಯಾಲೋವೀನ್ ಪಾರ್ಟಿಯ ಹಳೆಯ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸುಟ್ಟುಹಾಕಿದ ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.