ಹಿಂದಿ ಸೈನ್‌ಬೋರ್ಡ್‌ಗಳಿಗೆ ಮಸಿ ಬಳಿಯುವ ಸಿಖ್ ಕಾರ್ಯಕರ್ತರ 2017 ರ ಚಿತ್ರಗಳನ್ನು ಹಾಲಿ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಪಂಜಾಬ್‌ನ ಹೋರಾಟನಿರತ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂದಿ ಸೈನ್‌ಬೋರ್ಡ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಫೋಟೊ ಕೊಲಾಜ್ ಮತ್ತು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸಿಖ್ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿರುವ ಫಲಕಕ್ಕೆ ಕಪ್ಪು ಬಣ್ಣ ಬಳಿಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿರುವುದರಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಪಂಜಾಬ್‌ನ ಹೋರಾಟನಿರತ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂದಿ ಸೈನ್‌ಬೋರ್ಡ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ.

ನಿಜಾಂಶ: ಸೈನ್‌ಬೋರ್ಡ್‌ಗಳಲ್ಲಿ ಪಂಜಾಬಿ ಭಾಷೆಗೆ ಆದ್ಯತೆ ನೀಡುವಂತೆ ಕೋರಿ 2017 ರ ಅಕ್ಟೋಬರ್‌ನಲ್ಲಿ ಪಂಜಾಬ್‌ನಲ್ಲಿ ನಡೆಸಿದ ಸಿಖ್ ಕಾರ್ಯಕರ್ತರ ರ್ಯಾಲಿಗೆ ಸಂಬಂಧಿಸಿದ ಫೋಟೊಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಿಖ್ ಕಾರ್ಯಕರ್ತರು ಬತಿಂಡಾ-ಫರೀದ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬೃಹತ್ ರ್ಯಾಲಿಯನ್ನು ನಡೆಸಿದರು. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರಗಳು ಮತ್ತು ವೀಡಿಯೊಗಳಿಗೂ ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಚಿತ್ರಗಳು:

ಪೋಸ್ಟ್‌ನಲ್ಲಿನ ಫೋಟೋಗಳ ರಿವರ್ಸ್ ಇಮೇಜ್ ಮಾಡಿದಾಗ, 25 ಅಕ್ಟೋಬರ್ 2017 ರಂದು ‘ಇಂಡಿಯಾ ಟಿವಿ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಲೇಖನದಲ್ಲಿ, ಸಿಖ್ ಕಾರ್ಯಕರ್ತರ ಗುಂಪು ಫಲಕದಲ್ಲಿನ ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳಿಗೆ ಕಪ್ಪು ಬಣ್ಣ ಬಳಿದಿದ್ದಾರೆ ಎಂದು ವರದಿಯಾಗಿದೆ. 2017 ರಲ್ಲಿ ಪಂಜಾಬ್‌ನ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಸೈನ್‌ಬೋರ್ಡ್‌ಗಳಲ್ಲಿ ಪಂಜಾಬಿ ಭಾಷೆಗೆ ಆದ್ಯತೆ ನೀಡುವಂತೆ ಕೋರಿ, ಸಿಖ್ ಕಾರ್ಯಕರ್ತರ ಗುಂಪು ಬತಿಂಡಾ-ಫರೀದ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಸೈನ್‌ಬೋರ್ಡ್‌ಗಳಿಗೆ ಕಪ್ಪು ಬಣ್ಣ ಬಳಿಯಲು ಈ ಬೃಹತ್ ರ್ಯಾಲಿಯನ್ನು ಕೈಗೊಂಡಿದೆ ಎಂದು ವರದಿಯಾಗಿದೆ. ದಾಲ್ ಖಲ್ಸಾ, ಎಸ್‌ಎಡಿ (ಅಮೃತಸರ), ಬಿಕೆಯು (ಕ್ರಾಂತಿಕಾರಿ) ಮತ್ತು ಇತರ ಸಂಸ್ಥೆಗಳ ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದೇ ವರದಿಯ ವಿಡಿಯೋವನ್ನು ‘ಇಂಡಿಯಾ ಟಿವಿ’ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದೆ.

10 ಅಕ್ಟೋಬರ್ 2017 ಮತ್ತು 21 ಅಕ್ಟೋಬರ್ 2017 ರಂದು ‘ಖಲ್ಸಾ ಫೋರ್ಸ್’ ವೆಬ್‌ಸೈಟ್ ಪ್ರಕಟಿಸಿದ ಲೇಖನಗಳಲ್ಲಿ ಇದೇ ರೀತಿಯ ಚಿತ್ರಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ರ್ಯಾಲಿಯ ಸಂಪೂರ್ಣ ವೀಡಿಯೊವನ್ನು ‘ಖಲ್ಸಾ ಫೋರ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಿಖ್ ಕಾರ್ಯಕರ್ತರು ಆಯೋಜಿಸಿದ್ದ ಈ ರ್ಯಾಲಿಯನ್ನು ವರದಿ ಮಾಡಿ, ಇತರ ಕೆಲವು ಸುದ್ದಿ ವೆಬ್‌ಸೈಟ್‌ಗಳು 2017 ರಲ್ಲಿ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಲಾದ ಚಿತ್ರಗಳು ಸಿಖ್ ಕಾರ್ಯಕರ್ತರು ನಡೆಸಿದ 2017 ರ ರ್ಯಾಲಿಗೆ ಸಂಬಂಧಿಸಿವೆ ಎಂದು ನಾವು ತೀರ್ಮಾನಿಸಬಹುದು.

ವಿಡಿಯೋ:

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಫೆಬ್ರವರಿ 22, 2019 ರಂದು ಪೋಸ್ಟ್ ಮಾಡಲಾದ ಯೂಟ್ಯೂಬ್ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ವೀಡಿಯೊ ಎಲ್ಲಿಯದು ಎಂದು ನಮಗೆ ಕಂಡುಹಿಡಿಯಲಾಗದಿದ್ದರೂ, ಈ ವೀಡಿಯೊ ಭಾರತ ಸರ್ಕಾರವು ಹೊಸ ಕೃಷಿ ಸುಗ್ರೀವಾಜ್ಞೆಗಳನ್ನು ಅಂಗೀಕರಿಸುವ ಮೊದಲೇ ಅಂತರ್ಜಾಲದಲ್ಲಿದೆ ಎಂದು ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ ಹಿಂದಿ ಸೈನ್‌ಬೋರ್ಡ್‌ಗಳಿಗೆ ಮಸಿ ಬಳಿಯುವ ಸಿಖ್ ಕಾರ್ಯಕರ್ತರ 2017 ರ ಚಿತ್ರಗಳನ್ನು ಹಾಲಿ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ.