ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರ್ ಟೀಕಿಸಿದ್ದಾರೆ ಎಂದು ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಪ್ರಧಾನಿ ಮೋದಿಯವರ ಕ್ರಮಗಳ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಧ್ವನಿ ಎತ್ತಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರತಿಭಟನಾಕಾರರ ಬಗ್ಗೆ ನರೇಂದ್ರ ಮೋದಿಯವರು ನೀಡಿದ ‘ಆಂದೋಲನ್ ಜೀವಿ’ ಹೇಳಿಕೆ ಹಿನ್ನೆಲೆಯಲ್ಲಿ, “ದೇಶದ ಪ್ರಧಾನಿ ಏನು ಹೇಳುತ್ತಿದ್ದಾರೋ ಅದು ಪ್ರಜಾಪ್ರಭುತ್ವ ವಿರೋಧಿಯಾದದ್ದು. ಚಳವಳಿ, ಆಂದೋಲನ ನಡೆಸುವುದು ಜನರ, ಪ್ರತಿಪಕ್ಷಗಳ ಹಕ್ಕು. ಇದನ್ನು ಪ್ರಧಾನಿ ನೀಡಿಲ್ಲ. ನಮ್ಮ ಸಂವಿಧಾನ ನೀಡಿದೆ” ಎಂದು ಗಡ್ಕರಿ ಹೇಳಿದ್ದಾರೆ ಎಂಬುದಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.

ಸತ್ಯಾಂಶ: ಈ ವೀಡಿಯೊ ನಿತಿನ್ ಗಡ್ಕರಿ ಅವರ 2011ರ ಪತ್ರಿಕಾಗೋಷ್ಠಿಯನ್ನು ತೋರಿಸುತ್ತದೆ. ಆಗಿನ ಕಾಂಗ್ರೆಸ್ ಸರ್ಕಾರ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿತಿನ್ ಗಡ್ಕರಿ ಟೀಕಿಸಿದ್ದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಅಣ್ಣಾ ಹಜಾರೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮಗಳ ವಿರುದ್ಧ ನಿತಿನ್ ಗಡ್ಕರಿ ಧ್ವನಿ ಎತ್ತಿದ್ದರು. ನಡೆಯುತ್ತಿರುವ ರೈತರ ಪ್ರತಿಭಟನೆಗೂ ಈ ವೀಡಿಯೊಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊವನ್ನು 0.08 ರಿಂದ 0.38 ಸೆಕೆಂಡುಗಳವರೆಗೆ ಗಮನಿಸಿದಾಗ, ದೇಶದಲ್ಲಿ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ನಿಗ್ರಹಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ನಿತಿನ್ ಗಡ್ಕರಿ ಟೀಕಿಸುವುದನ್ನು ನಾವು ನೋಡಬಹುದು. ಅಲ್ಲದೆ, ಕಾಂಗ್ರೆಸ್ ಸರ್ಕಾರ ಮತ್ತು ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಅಂದಿನ ಪ್ರಧಾನ ಮಂತ್ರಿಯ ಕ್ರಮಗಳ ಬಗ್ಗೆ ನಿತಿನ್ ಗಡ್ಕರಿ ಅವರು ಹೇಳಿಕೆ ನೀಡಿದ್ದಾರೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಈ ವೀಡಿಯೊವನ್ನು ಹುಡುಕಿದಾಗ, ಅದೇ ವೀಡಿಯೊ ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿರುವುದು ಕಂಡುಬಂದಿದೆ. ಬಿಜೆಪಿ ಈ ವೀಡಿಯೊವನ್ನು 16 ಆಗಸ್ಟ್ 2011 ರಂದು ಪ್ರಕಟಿಸಿದೆ. ಈ ವೀಡಿಯೊವನ್ನು 15 ಆಗಸ್ಟ್ 2011 ರಂದು ನಡೆದ ಬಿಜೆಪಿ ಪತ್ರಿಕಾಗೋಷ್ಠಿಯ ದೃಶ್ಯಗಳು ಎಂದು ವರದಿ ಮಾಡಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಉಪವಾಸದ ಬಗ್ಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಲುವನ್ನು ಬಿಜೆಪಿ ನಾಯಕ ನಿತಿನ್ ಗಡ್ಕರಿ ಟೀಕಿಸಿದ್ದಾರೆ ಎಂದು ‘ಆಗಸ್ಟ್ 15, 2011 ರಂದು‘ ದಿ ಎಕನಾಮಿಕ್ ಟೈಮ್ಸ್ ’ವರದಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ, ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಿ ಎಂದು ಅಣ್ಣಾ ಹಜಾರೆ ಉಪವಾಸಕ್ಕೆ ಕೂರುವ ಮುನ್ನವೇ ದೆಹಲಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಯುಪಿಎ ಸರ್ಕಾರದ ವಿರುದ್ಧ ನಿತಿನ್ ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೇ ವರದಿ ಮಾಡಿ, ಇಂಡಿಯಾ ಟುಡೆ ನಿತಿನ್ ಗಡ್ಕರಿಯ ಪತ್ರಿಕಾಗೋಷ್ಠಿಯ ಹಿನ್ನೆಲೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, 2011 ರ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ನಿತಿನ್ ಗಡ್ಕರಿ ಅವರ ವೀಡಿಯೊವನ್ನು ಇತ್ತೀಚಿನ ಘಟನೆ ಎಂದು ಹೇಳಲಾಗುತ್ತಿದ್ದು, ಇದನ್ನು ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಪ್ರತಿಪಾದಿಸಲಾಗಿದೆ.